ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಐದು ದಿನ ಮೊಬೈಲ್ ಇಂಟರ್ನೆಟ್‌ ಸ್ಥಗಿತ

Update: 2024-02-16 09:44 GMT

Photo: PTI

ಇಂಫಾಲ: ಪೊಲೀಸ್ ಪೇದೆಯೊಬ್ಬರ ವಿರುದ್ಧ ಕ್ರಮ ಕೈಗೊಂಡ ನಂತರ ಚುರಾಚಂದಪುರದಲ್ಲಿ ಹಿಂಸಾಚಾರ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಮಣಿಪುರ ಸರಕಾರವು ಚುರಾಚಂದಪುರದಲ್ಲಿ ಐದು ದಿನಗಳ ಕಾಲ ಇಂಟರ್‌ ನೆಟ್ ಸೇವೆಯನ್ನು ಅಮಾನತುಗೊಳಿಸಿದೆ.

ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಉಪ ಆಯುಕ್ತರ ಕಚೇರಿಯ ಧ್ವಂಸ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಬಳಸುವ ವಾಹನಗಳಿಗೆ ಗುಂಪೊಂದರಿಂದ ಬೆಂಕಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮುಚ್ಚಯದ ಬಳಿ ಹಾರಿಸಲಾಗಿದ್ದ ರಾಷ್ಟ್ರ ಧ್ವಜವನ್ನು ಕೆಳಗಿಳಿಸಿದ ನಂತರ ಇಂದು ಬೆಳಗ್ಗೆ ಚುರಾಚಂದಪುರ ಜಿಲ್ಲೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣಗೊಂಡಿತ್ತು ಎಂದು ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

"ಸಮಾಜ ವಿರೋಧಿ ಶಕ್ತಿಗಳು ಅಂತರ್ಜಾಲ ಸೇವೆಯನ್ನು ಬಳಸಿಕೊಂಡು ವ್ಯಾಪಕವಾಗಿ ಚಿತ್ರಗಳು, ಪೋಸ್ಟ್‌ಗಳು ಹಾಗೂ ವಿಡಿಯೊ ಸಂದೇಶಗಳನ್ನು ಹಂಚಿಕೊಂಡು ಜನರನ್ನು ಪ್ರಚೋದಿಸುವ ಸಾಧ್ಯತೆ ಇದ್ದು, ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಪ್ರಚೋದನಾಕಾರಿ ತುಣುಕುಗಳು ಹಾಗೂ ವದಂತಿಗಳನ್ನು ಹರಡುವ ಮೂಲಕ ಕೋಮು ಸೌಹಾರ್ದತೆ ಹಾಗೂ ಸಾರ್ವಜನಿಕ ಶಾಂತಿಗೆ ತೊಂದರೆಯುಂಟು ಮಾಡುವ ಸಾಧ್ಯತೆ ಇದ್ದು, ಅದರಿಂದ ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗುವ ಭಾರಿ ಅಪಾಯವಿದೆ" ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ವಿಡಿಯೊವೊಂದರಲ್ಲಿ ಬಂದೂಕುಧಾರಿಯೊಬ್ಬನ ಜೊತೆ ಕಂಡು ಬಂದಿದ್ದ ಮುಖ್ಯ ಪೇದೆಯೊಬ್ಬರನ್ನು ಅಮಾನತುಗೊಳಿಸಿದ ಕೆಲವು ಗಂಟೆಗಳ ನಂತರ ಸರ್ಕಾರಿ ಸಮುಚ್ಚಯಕ್ಕೆ ನುಗ್ಗಿದ ಗುಂಪೊಂದು, ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಗುರುವಾರ ರಾತ್ರಿ ಹಿಂಸಾಚಾರ ಸ್ಫೋಟಗೊಂಡಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News