ಕಳೆದ 7 ತಿಂಗಳಲ್ಲಿ 861 ಮಕ್ಕಳನ್ನು ಪೋಷಕರ ಮಡಿಲು ಸೇರಿಸಿದ ಕೇಂದ್ರ ರೈಲ್ವೆ!

Update: 2024-11-10 15:22 GMT

PC : indiarailinfo.com

ಮುಂಬೈ: ಕಳೆದ 7 ತಿಂಗಳಲ್ಲಿ ಕಳೆದು ಹೋಗಿದ್ದ 861 ಮಕ್ಕಳನ್ನು ಕೇಂದ್ರ ರೈಲ್ವೆ ಪೋಷಕರ ಮಡಿಲಿಗೆ ಸೇರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪೈಕಿ ಮಾನಸಿಕ ಅಸ್ವಸ್ಥತೆ ಹೊಂದಿದ್ದ ಬಾಲಕನೊಬ್ಬನನ್ನು ಮಧ್ಯಪ್ರದೇಶದ ಖಾಂಡ್ವಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿಗಳು ಗಸ್ತು ತಿರುಗುವಾಗ ಪತ್ತೆ ಹಚ್ಚಿದ್ದಾರೆ. ಆ ಬಾಲಕನ ಬಲಗೈ ಮೇಲೆ ಮೊಬೈಲ್ ಸಂಖ್ಯೆಯ ಹಚ್ಚೆ ಹಾಕಲಾಗಿತ್ತು. ಆ ಸಂಖ್ಯೆಗೆ ಕರೆ ಮಾಡಿದಾಗ, ಬಾಲಕನು ಮಾನಸಿಕ ಅಸ್ವಸ್ಥತೆ ಹೊಂದಿದ್ದು, ಆಗಾಗ ದಾರಿ ತಪ್ಪುತ್ತಾನೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದರ ಬೆನ್ನಿಗೇ, ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿಗಳು ಸುಮಿತ್ ಎಂಬ ಆ ಬಾಲಕನನ್ನು ಪೋಷಕರೊಂದಿಗೆ ಒಟ್ಟುಗೂಡಿಸಿದ್ದಾರೆ.

ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿಗಳು ಹೀಗೆ ಪೋಷಕರೊಂದಿಗೆ ಒಟ್ಟುಗೂಡಿಸಿದ ಮಕ್ಕಳ 861ನೇ ಪ್ರಕರಣ ಅದಾಗಿತ್ತು. ಕಳೆದ ಏಳು ತಿಂಗಳಿನಿಂದ ‘ಆಪರೇಷನ್ ನನ್ಹೆ ಫರಿಶ್ತೆ’ ಎಂಬ ಕಾರ್ಯಾಚರಣೆಯಡಿ ಈ ಕೆಲಸವನ್ನು ಮಾಡಲಾಗಿದೆ ಎಂದು ರವಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಿತ್ ನಂತಹ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಕ್ಕಳಲ್ಲದೆ, ಓದಿನ ಬಗ್ಗೆ ನಿರಾಸಕ್ತಿ, ಪೋಷಕರೊಂದಿಗಿನ ಕಿತ್ತಾಟ, ಹಾಗೂ ಮುಂಬೈ ಗ್ಲಾಮರ್ ಪ್ರಪಂಚದಲ್ಲಿ ತಮಗೊಂದು ಉತ್ತಮ ಅವಕಾಶ ಪಡೆಯುವುದು ಸೇರಿದಂತೆ ಹಲವಾರು ವಿಚಿತ್ರ ಕಾರಣಗಳಿಗಾಗಿ ಮಕ್ಕಳು ರೈಲ್ವೆ ನಿಲ್ದಾಣಗಳಲ್ಲಿ ಏಕಾಂಗಿಯಾಗಿ ಕಂಡು ಬರುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಪ್ರಿಲ್ ನಿಂದ ಅಕ್ಟೋಬರ್ ನಡುವೆ ಕೇಂದ್ರ ರೈಲ್ವೆ ಅಧಿಕಾರಿಗಳು 589 ಬಾಲಕರು ಹಾಗೂ 272 ಬಾಲಕಿಯರನ್ನು ಅವರವರ ಪೋಷಕರೊಂದಿಗೆ ಒಟ್ಟುಗೂಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

"ಕಳೆದು ಹೋಗಿರುವ ಮಕ್ಕಳೊಂದಿಗೆ ಸಂಪರ್ಕ ಸಾಧಿಸುವ ನಮ್ಮ ರೈಲ್ವೆ ರಕ್ಷಣಾ ಸಿಬ್ಬಂದಿಗಳು, ಅವರೊಂದಿಗೆ ಸಮಾಲೋಚನೆ ನಡೆಸಿ, ಅವರನ್ನು ಸುರಕ್ಷಿತವಾಗಿ ಮನೆಗೆ ಮರಳಿಸುತ್ತಿದ್ದಾರೆ. ಇದರಿಂದ ಪೋಷಕರಿಂದ ಹೃದಯಪೂರ್ವಕ ಕೃತಜ್ಞತೆಗೆ ಪಾತ್ರರಾಗಿದ್ದಾರೆ” ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News