"ನಮ್ಮ ಸಂಸ್ಕೃತಿಗೆ ಸರಿ ಹೊಂದುವುದಿಲ್ಲ": ಸಾಮಾಜಿಕ ಮಾಧ್ಯಮಗಳಲ್ಲಿ ಅಸಭ್ಯ ವಿಷಯಗಳಿಗೆ ಕಡಿವಾಣ ಹಾಕುವ ಕಾನೂನಿಗೆ ಸಚಿವ ವೈಷ್ಣವ್ ಕರೆ
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ವಿಷಯಗಳಿಗೆ ಕಡಿವಾಣ ಹಾಕಲು ಕಾನೂನುಗಳ ರಚನೆಗೆ ಬುಧವಾರ ಕರೆ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಬಗ್ಗೆ ಪ್ರತಿಪಕ್ಷಗಳು ಚರ್ಚೆ ನಡೆಸುತ್ತವೆ ಎಂದು ಆಶಯವನ್ನು ವ್ಯಕ್ತಪಡಿಸಿದರು.
‘ನಮ್ಮ ದೇಶದ ಸಂಸ್ಕೃತಿಗೂ ಈ ಸಾಮಾಜಿಕ ಮಾಧ್ಯಮ ವೇದಿಕೆಗಳು ಬಂದಿರುವ ದೇಶಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಪ್ರತಿಪಕ್ಷಗಳು ನಮ್ಮೊಂದಿಗೆ ಕೈ ಜೋಡಿಸುತ್ತವೆ ಮತ್ತು ಈ ಬಗ್ಗೆ ನಾವು ಚರ್ಚೆ ನಡೆಸಬಹುದು ಎಂದು ನಾನು ಆಶಿಸಿದ್ದೇನೆ. ಸಂಸದೀಯ ಸ್ಥಾಯಿ ಸಮಿತಿಯು ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಮತ್ತು ಈ ಬಗ್ಗೆ ಕಠಿಣ ಕಾನೂನುಗಳು ರಚನೆಯಾಗಬೇಕು ಎಂದು ನಾನು ಬಯಸಿದ್ದೇನೆ ’ ಎಂದು ಸಂಸತ್ ಅಧಿವೇಶನದಲ್ಲಿ ವೈಷ್ಣವ ಹೇಳಿದರು.
ವೈಷ್ಣವ್ ಅವರೊಂದಿಗೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಅರುಣ ಗೋವಿಲ್ ಅವರು,‘ಸಾಮಾಜಿಕ ಮಾಧ್ಯಮಗಳಲ್ಲಿ,ವಿಶೇಷವಾಗಿ ಖಾಸಗಿ ವ್ಯಕ್ತಿಗಳು ನಮ್ಮ ಸಂಸ್ಕೃತಿಗೆ ಅನುಗುಣವಲ್ಲದ ಬಹಳಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ವಿವಿಧ ವೇದಿಕೆಗಳಲ್ಲಿಯ ಇಂತಹ ವಿಷಯಗಳ ಮೇಲೆ ನಿಕಟ ನಿಗಾಯಿರಿಸಲು ಕಾವಲು ವ್ಯವಸ್ಥೆಯ ಅಗತ್ಯವಿದೆ. ಯಾವುದೇ ನಿಯಂತ್ರಣವಿಲ್ಲದ್ದರಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಎಲ್ಲ ರೀತಿಯ ವಿಷಯಗಳನ್ನು ನೋಡಬಹುದು. ಇವುಗಳಿಂದಾಗಿ ಯುವಜನರು ದಾರಿ ತಪ್ಪುತ್ತಿದ್ದಾರೆ’ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮಗಳು ತಮ್ಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುವ ವಿಷಯಗಳ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಹಾನಿಕಾರಕ ವಿಷಯಗಳ ವಿರುದ್ಧ ತ್ವರಿತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಬಯಸಿರುವ ಸರಕಾರವು,ಸಾಮಾಜಿಕ ಮಾಧ್ಯಮಗಳು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸುವ ಮತ್ತು ಬಳಕೆದಾರರ ದೂರುಗಳನ್ನು ಪರಿಹರಿಸಲು ಕಾರ್ಯವಿಧಾನವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದೆ.
ಸಾಮಾಜಿಕ ಮಾಧ್ಯಮಗಳು,ವಿಶೇಷವಾಗಿ ಭಾರತೀಯ ಸಮಾಜ ರಚನೆಗೆ ಹಾನಿಯನ್ನುಂಟು ಮಾಡುವ ವಿಷಯಗಳಿಗೆ ಕಡಿವಾಣ ಹಾಕಲು ಹೆಚ್ಚಿನ ಸ್ವಯಂ-ನಿಯಂತ್ರಕ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿರುವ ವೈಷ್ಣವ,ವಾಕ್ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯುತ ವಿಷಯ ನಿಯಂತ್ರಣದ ನಡುವೆ ಸಮತೋಲನ ಸಾಧಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಪ್ರತಿಪಾದಿಸಿದ್ದಾರೆ.