ಮಧ್ಯಪ್ರದೇಶ | ಕೊಳವೆ ಬಾವಿ ನೀರಿನ ವಿವಾದದಲ್ಲಿ ದಲಿತ ಯುವಕನನ್ನು ಥಳಿಸಿ ಹತ್ಯೆ
ಭೋಪಾಲ : ಕೊಳವೆ ಬಾವಿಯಿಂದ ನೀರನ್ನೆತ್ತುವ ವಿಷಯದಲ್ಲಿ ಜಗಳ ನಡೆದು ಗ್ರಾಮದ ಸರಪಂಚ ಮತ್ತು ಇತರರು ದಲಿತ ಯುವಕನೋರ್ವನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ.
ಹತ್ಯೆಯಾಗಿರುವ ಯುವಕನನ್ನು ನಾರದ ಜಾಟವ್(30) ಎಂದು ಗುರುತಿಸಲಾಗಿದೆ. ಆತ ಇಂದರ್‌ಗಡ ಗ್ರಾಮದ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಾಗ ಮಂಗಳವಾರ ಸಂಜೆ ಘಟನೆ ನಡೆದಿದೆ. ಜಾಟವ್ ನೆರವಿಗಾಗಿ ಕೂಗಿಕೊಳ್ಳುತ್ತಿದ್ದರೆ ಹಲವಾರು ಜನರು ಆತನನ್ನು ದೊಣ್ಣೆಗಳು ಮತ್ತು ಸರಳುಗಳಿಂದ ಥಳಿಸುತ್ತಿದ್ದ ದೃಶ್ಯ ವೀಡಿಯೊದಲ್ಲಿ ದಾಖಲಾಗಿದೆ.
ಸರಪಂಚ ಪದಮ್ ಧಾಖಡ್,ಆತನ ಸೋದರ ಮೊಹರ್ ಪಾಲ್ ಧಾಖಡ್, ಪುತ್ರ ಅಂಕೇಶ ಧಾಖಡ್ ಮತ್ತು ಕುಟುಂಬದ ಇತರ ಸದಸ್ಯರು ಜಾಟವ್‌ನನ್ನು ಸುತ್ತುವರಿದು ಥಳಿಸಲು ಆರಂಭಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಜಾಟವ್ ಸಾಯುವವರೆಗೂ ಥಳಿತ ಮುಂದುವರಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದು ಸರಪಂಚ ಮತ್ತು ಆತನ ಸಂಬಂಧಿಗಳಿಂದ ಪೂರ್ವಯೋಜಿತ ಕೊಲೆಯಾಗಿದೆ ಎಂದು ಜಾಟವ್ ಕುಟುಂಬಿಕರು ಆರೋಪಿಸಿದ್ದಾರೆ.
ಹಲವರು ವರ್ಷಗಳ ಹಿಂದೆ ಕೊರೆಸಲಾಗಿದ್ದ ಕೊಳವೆ ಬಾವಿ ವಿಷಯದಲ್ಲಿ ಜಾಟವ್ ಮತ್ತು ಸರಪಂಚನ ಕುಟುಂಬಗಳ ನಡುವೆ ಹಿಂದಿನಿಂದಲೂ ವಿವಾದವಿತ್ತು. ಜಾಟವ್ ಕುಟುಂಬವು ಕೃಷಿಗಾಗಿ ಕೊಳವೆ ಬಾವಿಯ ನೀರನ್ನು ಬಳಸುತ್ತಿದ್ದರೆ ಸರಪಂಚ ತನ್ನ ಹೋಟೆಲ್‌ಗೆ ನೀರು ಪೂರೈಸಲು ಜಾಟವ್ ಕುಟುಂಬಕ್ಕೆ ಸೇರಿದ ಜಮೀನಿನ ಮೂಲಕ ಅನಧಿಕೃತವಾಗಿ ಕೊಳವೆಯನ್ನು ಅಳವಡಿಸಿದ್ದ ಎನ್ನಲಾಗಿದೆ.
ದಲಿತ ಯುವಕನ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಪ್ರತಿಪಕ್ಷಗಳು ಜಾತಿಯಾಧಾರಿತ ತಾರತಮ್ಯ ಮತ್ತು ಹಿಂಸಾಚಾರವನ್ನು ತಡೆಯುವಲ್ಲಿ ರಾಜ್ಯ ಸರಕಾರದ ವೈಫಲ್ಯವನ್ನು ಟೀಕಿಸಿವೆ. ಕಾಂಗ್ರೆಸ್ ಪಕ್ಷವು ಘಟನೆ ಸಂದರ್ಭದಲ್ಲಿ ವಿದೇಶ ಪ್ರವಾಸದಲ್ಲಿರುವ ರಾಜ್ಯದ ಗೃಹಸಚಿವರನ್ನು ವಿಶೇಷವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಎಕ್ಸ್ ಪೋಸ್ಟ್‌ನಲ್ಲಿ ಘಟನೆಯ ವೀಡಿಯೊವನ್ನು ಹಂಚಿಕೊಂಡಿರುವ ಕಾಂಗ್ರೆಸ್, ಶಿವಪುರಿಯಲ್ಲಿ ದಲಿತ ಯುವಕನನ್ನು ಪ್ರಬಲ ವ್ಯಕ್ತಿಗಳ ಗುಂಪು ಥಳಿಸಿ ಹತ್ಯೆ ಮಾಡಿದೆ. ರಾಜ್ಯದ ಗೃಹಸಚಿವರು ವಿದೇಶ ಪ್ರವಾಸದಲ್ಲಿ ವ್ಯಸ್ತರಾಗಿರುವಾಗ ಮತ್ತು ಅಪರಾಧಿಗಳಿಗೆ ಕಾನೂನಿನ ಭಯವಿಲ್ಲದಾಗ, ಅರಾಜಕತೆ ಮೇಲುಗೈ ಸಾಧಿಸಿದಾಗ ಇಂತಹ ಘಟನೆಗಳು ಸಾಮಾನ್ಯವಾಗುತ್ತವೆ. ರಾಜ್ಯದಲ್ಲಿ ಬಿಜೆಪಿಯ ಜಂಗಲ್ ರಾಜ್ ಅತಿರೇಕಕ್ಕೆ ತಲುಪಿದೆ ಮತ್ತು ಸಾಮಾನ್ಯ ಜನರು ಸುರಕ್ಷಿತರಾಗಿ ಉಳಿದಿಲ್ಲ ಎಂದು ಹೇಳಿದೆ.
ಈ ನಡುವೆ ಗ್ರಾಮದ ಸರಪಂಚ ಮತ್ತು ಇತರ ಏಳು ಜನರ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿರುವ ಪೋಲಿಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.