ನಾಳೆ ಸಿಜೆಐಯಾಗಿ ನ್ಯಾ. ಸಂಜೀವ್ ಖನ್ನಾ ಪ್ರಮಾಣ ವಚನ ಸ್ವೀಕಾರ

Update: 2024-11-10 17:17 GMT

ನ್ಯಾ. ಸಂಜೀವ್ ಖನ್ನಾ , ಡಿ.ವೈ. ಚಂದ್ರಚೂಡ್ | PTI 

ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸಂಜೀವ್ ಖನ್ನಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಸಂಜೀವ್ ಖನ್ನಾ ಅವರು ರವಿವಾರ ನಿವೃತ್ತರಾದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಸಂಜೀವ್ ಖನ್ನಾ ಅವರಿಗೆ 6 ತಿಂಗಳ ಅಧಿಕಾರಾವಧಿ ಇರಲಿದೆ. ಅವರು 2025 ಮೇ 13ರಂದು ನಿವೃತ್ತರಾಗಲಿದ್ದಾರೆ. ಅಕ್ಟೋಬರ್ 16ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಮಾಡಿದ ಶಿಫಾರಸಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಂಜೀವ್ ಖನ್ನಾ ಅವರನ್ನು ಮುಂದಿನ ಸಿಜೆಐಯಾಗಿ ನೇಮಕ ಮಾಡಿ ಅಕ್ಟೋಬರ್ 24ರಂದು ಅಧಿಸೂಚನೆ ಹೊರಡಿಸಿತ್ತು.

ಸಂಜೀವ್ ಖನ್ನಾ ಅವರು 1960 ಮೇ 14ರಂದು ಜನಿಸಿದರು. ಅವರು ದಿಲ್ಲಿಯ ಕಾನೂನು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 2005ರಲ್ಲಿ ಅವರು ದಿಲ್ಲಿ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು. ಅನಂತರ 2006ರಲ್ಲಿ ಅದೇ ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2019 ಜನವರಿ 18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.

ಪ್ರಕರಣಗಳು ಬಾಕಿ ಉಳಿಯುವುದನ್ನು ಕಡಿಮೆ ಮಾಡುವುದು ಹಾಗೂ ನ್ಯಾಯ ನೀಡುವುದನ್ನು ತರಿತಗೊಳಿಸುವುದು ನ್ಯಾ. ಸಂಜೀವ್ ಕುಮಾರ್ ಅವರ ಆದ್ಯತೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News