ರಾಜಸ್ಥಾನ | ಕಾಲೇಜುಗಳ ಗೋಡೆಗೆ ಕೇಸರಿ ಬಣ್ಣ ಬಳಿಯಲು ಸರಕಾರದ ಆದೇಶ
ಜೈಪುರ : ಕಾಯಕಲ್ಪ ಯೋಜನೆಯಡಿ ಹೊರಗೋಡೆಗಳಿಗೆ ಮತ್ತು ಪ್ರವೇಶ ಕೊಠಡಿಗಳಿಗೆ ಕೇಸರಿ ಬಣ್ಣವನ್ನು ಬಳಿಯುವಂತೆ ರಾಜಸ್ಥಾನ ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯು 20 ಸರಕಾರಿ ಕಾಲೇಜುಗಳಿಗೆ ಆದೇಶಿಸಿದೆ. ಇದು ಶಿಕ್ಷಣ ಸಂಸ್ಥೆಗಳಲ್ಲಿ ಸಕಾರಾತ್ಮಕ ವಾತಾವರಣವನ್ನು ಖಚಿತಪಡಿಸುತ್ತದೆ ಎಂದು ಅದು ಹೇಳಿದೆ.
ಕಾಯಕಲ್ಪ ಯೋಜನೆಯು ಸರಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣವನ್ನು ಉತ್ತೇಜಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರವ್ಯಾಪಿ ಉಪಕ್ರಮವಾಗಿದೆ.
ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕ(ಯೋಜನೆ) ವಿ.ಕೆ.ಶರ್ಮಾ ಅವರು ಕಳೆದ ತಿಂಗಳು ಹೊರಡಿಸಿರುವ ಆದೇಶದಲ್ಲಿ ಮೊದಲ ಹಂತದಲ್ಲಿ ಪ್ರತಿ ವಿಭಾಗ ಮಟ್ಟದಲ್ಲಿ ಎರಡು, ಒಟ್ಟು 20 ಕಾಲೇಜುಗಳಲ್ಲಿ ಕೇಸರಿ ಬಣ್ಣವನ್ನು ಬಳಿಯುವಂತೆ ಸೂಚಿಸಲಾಗಿದೆ. ಕಾಲೇಜುಗಳು ಉನ್ನತ ಶಿಕ್ಷಣದ ಮುಖ್ಯ ಕೇಂದ್ರಗಳಾಗಿವೆ. ಹಿಗಾಗಿ ವಿದ್ಯಾರ್ಥಿಗಳು ಕಾಲೇಜು ಪ್ರವೇಶಿಸಿದಾಗ ಅವರಲ್ಲಿ ಸಕಾರಾತ್ಮಕ ಭಾವನೆಯನ್ನು ಉಂಟು ಮಾಡುವ ವಾತಾವರಣವಿರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಏಶ್ಯನ್ ಪೇಂಟ್ಸ್ ವೈಟ್ ಗೋಲ್ಡ್ 8292 ಮತ್ತು ಏಶ್ಯನ್ ಪೇಂಟ್ಸ್ ಆರೇಂಜ್ ಕ್ರೌನ್ 7974 ಬಣ್ಣಗಳನ್ನೇ ಬಳಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಬಿಜೆಪಿ ಸರಕಾರದ ವಿರುದ್ಧ ದಾಳಿ ನಡೆಸಿದ ರಾಜಸ್ಥಾನ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಸ್ವರ್ಣಿಮ ಚತುರ್ವೇದಿಯವರು, ಕೇಸರಿ ಬಣ್ಣವನ್ನು ಬಳಿಯುವ ಕ್ರಮವು ಶಿಕ್ಷಣ ಸಂಸ್ಥೆಗಳನ್ನು ರಾಜಕೀಯಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸರಕಾರವು ವಿಫಲಗೊಂಡಿದೆ. ತನ್ನ ಸಾಧನೆಗಳೆಂದು ಎತ್ತಿ ತೋರಿಸಲು ಸರಕಾರದ ಬಳಿ ಏನೂ ಇಲ್ಲ. ಗಮನವನ್ನು ಬೇರೆಡೆಗೆ ಸೆಳೆಯಲು ಅದು ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.