ಚಿಲ್ಲರೆ ಹಣದುಬ್ಬರ ಶೇ.6.21 | 14 ತಿಂಗಳುಗಳಲ್ಲಿಯೇ ಅತ್ಯಂತ ಗರಿಷ್ಠ

Update: 2024-11-12 15:51 GMT

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ : ಭಾರತದಲ್ಲಿ ಚಿಲ್ಲರೆ(ರಿಟೇಲ್) ಹಣದುಬ್ಬರವು ಆಕ್ಟೋಬರ್‌ನಲ್ಲಿ ಶೇ.6.21ಕ್ಕೆ ತಲುಪಿದ್ದು, ಕಳೆದ 14 ತಿಂಗಳುಗಳಲ್ಲಿಯೇ ಅತ್ಯಂತ ಗರಿಷ್ಠ ಏರಿಕೆಯನ್ನು ಕಂಡಿದೆ. ತರಕಾರಿ ದರಗಳಲ್ಲಿ ಗಣನೀಯ ಏರಿಕೆ, ಮುಂದಿನ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಇಲ್ಲದಿರುವುದು ಹಣದುಬ್ಬರ ಹೆಚ್ಚಳಕ್ಕೆ ಕಾರಣವೆನ್ನಲಾಗಿದೆ.

ಆಕ್ಟೋಬರ್‌ ನಲ್ಲಿ ಚಿಲ್ಲರೆಹಣದುಬ್ಬರವು ಶೇ.6.21ಕ್ಕೆ ತಲುಪಿರುವುದು, ಕಳೆದೊಂದು ವರ್ಷದಲ್ಲಿ ಪ್ರಥಮ ಬಾರಿಗೆ ಅದು ರಿಸರ್ವ್ ಬ್ಯಾಂಕ್‌ನ ಸಹಿಷ್ಣುತಾ ಮಿತಿ ಶೇ.2-ಶೇ.6ರ ಗಡಿಯನ್ನು ದಾಟಿದೆ ಎಂದು ಕೇಂದ್ರ ಸರಕಾರವು ಮಂಗಳವಾರ ಬಿಡುಗಡೆಗೊಳಿಸಿದ ಹೇಳಿಕೆಯು ತಿಳಿಸಿದೆ.

ಆಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದರವು ಅರ್ಥಶಾಸ್ತ್ರಜ್ಞರು ಮುನ್ನಂದಾಜಿಸಿದ್ದ ಶೇ.5.81ರ ದರಕ್ಕಿಂತಲೂ ಅಧಿಕವಾಗಿದೆ. ಇದಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ ನಲ್ಲಿ ಚಿಲ್ಲರೆ ಹಣದುಬ್ಬರವು ಶೇ.5.49 ಆಗಿದ್ದು, ಕಳೆದ 9 ತಿಂಗಳುಗಳಲ್ಲಿಯೇ ಗರಿಷ್ಠವಾಗಿತ್ತು.

ಆಹಾರವಸ್ತುಗಳು ಅದರಲ್ಲೂ ವಿಶೇಷವಾಗಿ ತಕಾರಿಗಳ ಬೆಲೆ ಏರಿಕೆಯು ಮಧ್ಯಮವರ್ಗದ ಕುಟುಂಬಗಳ ಖರೀದಿ ಸಾಮರ್ಥ್ಯವನ್ನು ಕ್ಷೀಣಿಸಿದೆ. ಕಾರ್ಪೊರೇಟ್ ಆದಾಯದ ಮೇಲೂ ಈ ಬೆಳವಣಿಗೆಯು ಪ್ರತಿಕೂಲ ಪರಿಣಾಮವನ್ನುಂಟು ಮಾಡಿದ್ದು, ಏಶ್ಯದ ತೃತೀಯ ಅತಿ ದೊಡ್ಡ ಆರ್ಥಿಕತೆಯಾದ ಭಾರತದ ಮೇಲೆ ಒತ್ತಡವನ್ನುಂಟು ಮಾಡಲಿದೆ.

2024-25ರ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ.7.2 ಆಗಿರುವುದೆಂದು ಆರ್‌ಬಿಐ ಅಂದಾಜಿಸಿದೆ. ಆದರೆ ನಗರಪ್ರದೇಶಗಳಲ್ಲಿ ಖರೀದಿ ಸಾಮರ್ಥ್ಯವು ದುರ್ಬಲಗೊಂಡಿರುವುದನ್ನು ಉಲ್ಲೇಖಿಸಿ ಖಾಸಗಿ ಅರ್ಥಶಾಸ್ತ್ರಜ್ಞರು ಅಂದಾಜು ಬೆಳವಣಿಗೆ ದರವನ್ನು ಕಡಿಮೆ ಮಟ್ಟಕ್ಕೆ ಇಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News