ವಯನಾಡ್ ಲೋಕಸಭಾ, 31 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ
ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿಯವರ ರಾಜೀನಾಮೆಯಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರ ಹಾಗೂ 10 ರಾಜ್ಯಗಳ 31 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಾಗಿ ಮತದಾನ ಮುಂಜಾನೆ 7ಕ್ಕೆ ಆರಂಭವಾಗಿದೆ. ಇದರ ಜತೆಗೆ ಜಾರ್ಖಂಡ್ ವಿಧಾನಸಭೆಯ 43 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ.
ಜಾರ್ಖಂಡ್ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಜತೆಗೆ ಈ ಉಪಚುನಾವಣೆಯನ್ನು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಹಾಗೂ ವಿರೋಧಿ ಇಂಡಿಯಾ ಮೈತ್ರಿಕೂಟಕ್ಕೆ ಅಗ್ನಿಪರೀಕ್ಷೆ ಎಂದು ವಿಶ್ಲೇಷಿಸಲಾಗಿದೆ. ಉಪಚುನಾವಣೆ ನಡೆಯುತ್ತಿರುವ ಬಹುತೇಕ ಕ್ಷೇತ್ರಗಳು, ಶಾಸಕರು ಲೋಕಸಭೆಗೆ ಆಯ್ಕೆಯಾಗಿರುವುದರಿಂದ ತೆರವಾದ ಸ್ಥಾನಗಳಾಗಿವೆ. ಮತ್ತೆ ಕೆಲವು ಶಾಸಕರ ನಿಧನದಿಂದ ತೆರವಾದ ಸ್ಥಾನಗಳೂ ಸೇರಿವೆ.
ರಾಜಸ್ಥಾನದ ಏಳು, ಪಶ್ಚಿಮ ಬಂಗಾಳದ ಆರು, ಅಸ್ಸಾಂನ ಐದು, ಬಿಹಾರದ ನಾಲ್ಕು, ಕರ್ನಾಟಕದ ಮೂರು, ಮಧ್ಯಪ್ರದೇಶದ ಎರಡು, ಛತ್ತೀಸ್ಗಢ, ಗುಜರಾತ್, ಕೇರಳ ಹಾಗೂ ಮೇಘಾಲಯದ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಉತ್ತರ ಪ್ರದೇಶದ ಒಂಬತ್ತು, ಪಂಜಾಬ್ನ ನಾಲ್ಕು ಮತ್ತು ಕೇರಳದ ಒಂದು ಸ್ಥಾನಗಳಿಗೆ ಚುನಾವಣೆ ಈ ತಿಂಗಳ 20ರಂದು ನಡೆಯಲಿದೆ.
ಸಿಕ್ಕಿಂನ ಸೊರೆಂಗ್ ಚಕುಂಗ್ ಮತ್ತು ನಮಚಿ-ಸಿಂಗ್ತಿಥಾಂಗ್ ಕ್ಷೇತ್ರಗಳಿಗೆ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) ಅಭ್ಯರ್ಥಿಗಳಾದ ಆದಿತ್ಯ ಗೋಲಯ್ ಮತ್ತು ಸತೀಶ್ ಚಂದ್ರ ರಾಯ್ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವದ್ರಾ ಮೊಟ್ಟಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಅವರ ಸಹೋದರ ರಾಹುಲ್ಗಾಂಧಿಯವರು ರಾಯಬರೇಲಿ ಕ್ಷೇತ್ರದಿಂದಲೂ ಆಯ್ಕೆಯಾದ ಹಿನ್ನೆಲೆಯಲ್ಲಿ ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯುತ್ತಿದೆ. ಪ್ರಿಯಾಂಕಾ ವಿರುದ್ಧ ಎಲ್ಡಿಎಫ್ನ ಸತ್ಯನ್ ಮೊಕೇರಿ ಮತ್ತು ಎನ್ಡಿಎಯ ನವ್ಯ ಹರಿದಾಸ್ ಹಾಗೂ ಇತರ 13 ಮಮದಿ ಅಭ್ಯರ್ಥಿಗಳಿದ್ದಾರೆ. 2019ರ ಚುನಾವಣೆಯಲ್ಲಿ ರಾಹುಲ್ 4.3 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರೆ, ಕಳೆದ ಬಾರಿ ವಿಜಯದ ಅಂತರ 3.5 ಲಕ್ಷಕ್ಕೆ ಕುಸಿದಿತ್ತು.