ʼರಝಾಕಾರರ ದಾಳಿಯಲ್ಲಿ ಖರ್ಗೆ ತಾಯಿ, ಸಹೋದರಿ ಮೃತಪಟ್ಟಿದ್ದರೂ, ಮುಸ್ಲಿಂ ಮತ ಬ್ಯಾಂಕ್‌ ಗಾಗಿ ಮೌನವಾಗಿದ್ದಾರೆʼ: ಯುಪಿ ಸಿಎಂ ಆದಿತ್ಯನಾಥ್

Update: 2024-11-13 10:20 GMT

 ಆದಿತ್ಯನಾಥ್, ಮಲ್ಲಿಕಾರ್ಜುನ ಖರ್ಗೆ | PC : PTI

ಅಮರಾವತಿ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ರಝಾಕರ ದಾಳಿಯಲ್ಲಿ ತಮ್ಮ ತಾಯಿ ಮತ್ತು ಸಹೋದರಿಯ ದುರಂತ ಸಾವಿನ ಬಗ್ಗೆ ಉದ್ದೇಶಪೂರ್ವಕವಾಗಿ ಮೌನವಾಗಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಂಗಳವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಅಮರಾವತಿಯ ಅಚಲ್ಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಕೇಸರಿ ಉಡುಗೆ ಮತ್ತು “ಬಾಟೇಂಗೆ ತೊ ಕಾಟೇಂಗೆ" (ವಿಭಜನೆಯಾದ್ರೆ, ನಮ್ಮನ್ನು ಮುಗಿಸ್ತಾರೆ) ಎಂಬ ತನ್ನ ಘೋಷಣೆಯ ಬಗೆಗಿನ ಪ್ರತಿಪಕ್ಷದ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ. ನಾನು ಯೋಗಿ, ಮತ್ತು ನನಗೆ ರಾಷ್ಟ್ರ ಮೊದಲು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ತುಷ್ಟೀಕರಣ ರಾಜಕೀಯ ಮೊದಲು ಎಂದು ಹೇಳಿದ್ದಾರೆ.

ಖರ್ಗೆ ನಿಝಾಮರ ಆಳ್ವಿಕೆಯ ಹಿಂದಿನ ಹೈದರಾಬಾದ್ ರಾಜ್ಯದ ಬೀದರ್ ಪ್ರದೇಶದಲ್ಲಿ ಜನಿಸಿದರು. ಖರ್ಗೆ ಜೀ ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ, ನೀವು ಸಿಟ್ಟು ಮಾಡಿಕೊಳ್ಳುತ್ತಿದ್ದರೆ ಹೈದರಾಬಾದ್ ನಿಝಾಮನ ಮೇಲೆ ಸಿಟ್ಟು ಮಾಡಿಕೊಳ್ಳಿ, ಹೈದರಾಬಾದ್ ನಿಝಾಮರ ರಝಾಕರು ನಿಮ್ಮ ಗ್ರಾಮವನ್ನು ಸುಟ್ಟುಹಾಕಿದ್ದಾರೆ. ಹಿಂದೂಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಿಮ್ಮ ತಾಯಿ, ಸಹೋದರಿ, ನಿಮ್ಮ ಕುಟುಂಬದ ಸದಸ್ಯರನ್ನು ಸುಟ್ಟುಹಾಕಿದ್ದಾರೆ. ಖರ್ಗೆ ಅವರು ನಿಝಾಮರ ಪಡೆಗಳ ದೌರ್ಜನ್ಯದ ಬಗ್ಗೆ ಮಾತನಾಡಿದರೆ ಮುಸ್ಲಿಂ ಮತಗಳನ್ನು ಕಳೆದುಕೊಳ್ಳಬಹುದು ಎಂಬ ಭಯದಿಂದ ಈ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಕಾಂಗ್ರೆಸ್ ಇತಿಹಾಸವನ್ನು ತಿರಸ್ಕರಿಸಲು ಪ್ರಯತ್ನಿಸುತ್ತಿದೆ ಮತ್ತು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಖರ್ಗೆ ತಮ್ಮ ಕುಟುಂಬಕ್ಕೆ ಏನಾಯಿತು ಎಂಬುದನ್ನು ಮರೆತಿದ್ದಾರೆ ಎಂದು ಆದಿತ್ಯನಾಥ್ ಆರೋಪಿಸಿದ್ದಾರೆ.

1946ರಲ್ಲಿ ಕಾಂಗ್ರೆಸ್ ನಾಯಕತ್ವವು ಮುಸ್ಲಿಂ ಲೀಗ್‌ ನೊಂದಿಗೆ ರಾಜಿ ಮಾಡಿಕೊಂಡಿದೆ, ಇದರ ಪರಿಣಾಮವಾಗಿ ಭಾರತದ ವಿಭಜನೆ ಮತ್ತು ಹಿಂದೂಗಳ ಹತ್ಯೆಯಾಯಿತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಿಝಾಮರು ಸ್ವತಂತ್ರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಅರಿತುಕೊಂಡಾಗ, ಅವರು ಹಿಂದೂಗಳನ್ನು ಹತ್ಯೆ ಮಾಡಿದರು. ಹಿಂದೂಗಳು ಮತ್ತು ಪರಿಶಿಷ್ಟ ಜಾತಿ ಜನರಿಗೆ ತಮ್ಮ ಸುರಕ್ಷತೆಗಾಗಿ ನಿಝಾಮರ ಆಳ್ವಿಕೆಯ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ತೆರಳಲು ಬಿ ಆರ್ ಅಂಬೇಡ್ಕರ್ ಕೂಡ ಸಲಹೆ ನೀಡಿದ್ದರು ಎಂದು ಆದಿತ್ಯನಾಥ್ ಹೇಳಿದ್ದಾರೆ.

ನೀವು ವಿಭಜನೆಯಾದರೆ, ನಿಮ್ಮ ಹೆಣ್ಣುಮಕ್ಕಳು ಅಸುರಕ್ಷಿತರಾಗುತ್ತಾರೆ, ದೇವಾಲಯಗಳ ಮೇಲೆ ದಾಳಿ ಮಾಡುತ್ತಾರೆ ಮತ್ತು ಸಮುದಾಯಗಳನ್ನು ಗುರಿಯಾಗಿಸುತ್ತಾರೆ. ಒಗ್ಗಟ್ಟಿಲ್ಲದಿದ್ದಾಗ ಏನಾಗುತ್ತದೆ ಎಂಬುದಕ್ಕೆ ಇದು ವಾಸ್ತವ ನಿದರ್ಶನವಾಗಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News