ಅತ್ಯಾಚಾರ ಪ್ರಕರಣ: ಅಸಾರಾಂ ಗೆ ಸುಪ್ರೀಂಕೋರ್ಟ್ ನಿಂದ ಮಧ್ಯಂತರ ಜಾಮೀನು
ಹೊಸದಿಲ್ಲಿ: 17 ದಿನಗಳ ಪೆರೋಲ್ ಮೇಲೆ ರಾಜಸ್ಥಾನದ ಜೋಧ್ ಪುರ್ ಜೈಲಿನಿಂದ ಬಿಡುಗಡೆಗೊಂಡು ಒಂದು ವಾರದ ಹಿಂದೆಯಷ್ಟೆ ಜೈಲಿಗೆ ಮರಳಿದ್ದ ಸ್ವಘೋಷಿತ ದೇವಮಾನವ ಅಸಾರಾಂಗೆ 2013ರ ಅತ್ಯಾಚಾರ ಪ್ರಕರಣದಲ್ಲಿ ಮಂಗಳವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ, ಆತ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಕಾರಣ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲದೆ ಜೈಲಿನಲ್ಲೇ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ವೈದ್ಯಕೀಯ ನೆಲೆಯ ಆಧಾರದ ಮೇಲೆ ಮಾರ್ಚ್ 31ರವರೆಗೆ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬಿಡುಗಡೆಯ ನಂತರ, ತಮ್ಮ ಹಿಂಬಾಲಕರನ್ನು ಭೇಟಿ ಮಾಡಬಾರದು ಎಂದು ನಿರ್ಬಂಧವನ್ನು ವಿಧಿಸಿದೆ.
2013ರಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 2018ರಲ್ಲಿ ಜೋಧ್ ಪುರದ ನ್ಯಾಯಾಲಯವು ಅಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೇ ಪ್ರಕರಣದಲ್ಲಿ ಆತನ ಇಬ್ಬರು ಸಹಚರರಿಗೆ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
2013ರಲ್ಲಿ ಗಾಂಧಿನಗರದ ಸಮೀಪವಿರುವ ಆಶ್ರಮವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಜನವರಿ 2023ರಲ್ಲಿ ಅವರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿತ್ತು. 2013ರ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ತನಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಅಸಾರಾಂ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಗುಜರಾತ್ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು.