ಮಹಾರಾಷ್ಟ್ರ | ಶರದ್ ಬಣದ 8 ಮಂದಿ ಸಂಸದರು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿಗೆ ಸೇರುವ ಸಾಧ್ಯತೆ : ವರದಿ
ಮುಂಬೈ: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ(ಎನ್ಸಿಪಿ) ಕನಿಷ್ಠ ಎಂಟು ಮಂದಿ ಸಂಸದರು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿಗೆ ಸೇರುವ ಸಾಧ್ಯತೆ ಇದೆ ಎಂದು ವರದಿಯಾಗಿದ್ದು, ಈ ಬೆಳವಣಿಗೆಯು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಗೆ ಪ್ರಮುಖ ಸವಾಲಾಗಿದೆ.
ಜುಲೈ 2023ರಲ್ಲಿ ಎನ್ ಸಿಪಿ ಪಕ್ಷ ವಿಭಜನೆಯಾದ ನಂತರ ಭಾರತೀಯ ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನೈಜ ಎನ್ ಸಿಪಿ ಎಂದು ಹೇಳಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ನೀಡಿತ್ತು. ಮಹಾರಾಷ್ಟ್ರದಲ್ಲಿ ಮಹಾಯುತಿ ಅಭೂತಪೂರ್ವ ಗೆಲುವಿನ ಬಳಿಕ ಬಿಜೆಪಿ- ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರಕಾರವನ್ನು ರಚಿಸಿತ್ತು.
ಶರದ್ ಪವಾರ್ ಅವರು ಮಹಾಯುತಿ ಮೈತ್ರಿಕೂಟವನ್ನು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಕೇಂದ್ರ ಸಚಿವ ಸಂಪುಟದಲ್ಲಿ ತಮ್ಮ ಪುತ್ರಿ ಸುಪ್ರಿಯಾ ಸುಳೆಗೆ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಸುಪ್ರಿಯಾ ಸುಳೆ ಕೂಡ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದರು.