ಜಾರ್ಖಂಡ್ ವಿಧಾನಸಭಾ ಚುನಾವಣೆ: ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ

Update: 2024-11-13 05:14 GMT
Photo: PTI

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆ ಹಿನ್ನೆಲೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 9 ಗಂಟೆ ವೇಳೆಗೆ 13.04% ಮತದಾನ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾರ್ಖಂಡ್ ವಿಧಾನಸಭೆ ಚುನಾವಣೆ ಹಿನ್ನೆಲೆ ಮೊದಲ ಹಂತದಲ್ಲಿ ಬುಡಕಟ್ಟು ಪ್ರಾಬಲ್ಯದ ದಕ್ಷಿಣ ಚೋಟಾನಾಗ್ಪುರ, ಉತ್ತರ ಪಲಮು ಮತ್ತು ಕೊಲ್ಹಾನ್ ಪ್ರದೇಶಗಳಲ್ಲಿನ 43 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. 43 ಕ್ಷೇತ್ರಗಳಲ್ಲಿ 20 ಎಸ್ಟಿ ಮತ್ತು 6 ಎಸ್ಸಿ ಮೀಸಲು ಕ್ಷೇತ್ರಗಳಿವೆ.

ಇದಲ್ಲದೆ ಕೇರಳ, ರಾಜಸ್ಥಾನ, ಗುಜರಾತ್, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಕರ್ನಾಟಕ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ನಡೆಯುತ್ತಿದೆ. ಕೇರಳದ ವಯನಾಡ್ ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧೆಯಲ್ಲಿದ್ದು, ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.

ಚುನಾವಣೆ ಹಿನ್ನೆಲೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾರ್ಖಂಡ್ನ ಸಹೋದರ ಸಹೋದರಿಯರೇ, ಇಂದು ನಿಮ್ಮ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ನಿಮ್ಮ ಹಕ್ಕುಗಳನ್ನು ರಕ್ಷಿಸಲು ಮತ್ತು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತವನ್ನು ಚಲಾಯಿಸುವಂತೆ ನಾನು ಮತದಾರರಲ್ಲಿ ಮನವಿ ಮಾಡುತ್ತೇನೆ. INDIA ಮೈತ್ರಿಕೂಟಕ್ಕೆ ನೀವು ಹಾಕುವ ಪ್ರತಿ ಮತವೂ ನೀರು, ಅರಣ್ಯ ಮತ್ತು ಭೂಮಿಯನ್ನು ರಕ್ಷಿಸುವ 7 ಗ್ಯಾರಂಟಿಗಳ ಮೂಲಕ ನಿಮ್ಮ ಜೀವನಕ್ಕೆ ಸಮೃದ್ದಿಯನ್ನು ತರುತ್ತದೆ ಎಂದು ರಾಹುಲ್ ಗಾಂಧಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News