ಕೇರಳದಲ್ಲಿ ಒಲಿಂಪಿಕ್ಸ್ ಗಿಂತ ದೊಡ್ಡ ಕ್ರೀಡಾಕೂಟ!

Update: 2024-11-13 05:54 GMT

Photo: business-standard.com

ತಿರುವನಂತಪುರಂ: ಒಲಿಂಪಿಕ್ಸ್ ಮಾದರಿಯಲ್ಲಿ ಶಾಲಾ ಕ್ರೀಡಾಕೂಟವನ್ನು ಅಯೋಜಿಸುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಆದರೆ ಇದು ನಿಜ. ಕೇರಳದ ಸಾಮಾನ್ಯ ಶಿಕ್ಷಣ ಇಲಾಖೆ ವಾರ್ಷಿಕವಾಗಿ ಆಯೋಜಿಸುವ ಮೆಗಾ ಕ್ರೀಡಾಕೂಟ ಈ ಬಾರಿ ಎರ್ನಾಕುಲಂ ಜಿಲ್ಲೆಯಲ್ಲಿ ನಡೆಯುತ್ತಿದ್ದು, 24 ಸಾವಿರ ಯುವ ಅಥ್ಲೀಟ್ಗಳು 17 ಕಡೆಗಳಲ್ಲಿ 39 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ವಿಶೇಷ ಅಗತ್ಯತೆಯ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಕೂಡಾ ಕೇರಳ ಶಾಲಾ ಕ್ರೀಡಾಕೂಟದ ಮತ್ತೊಂದು ವಿಶೇಷತೆಯಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನ ಎಂಟು ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೂಡಾ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಇನ್ನೊಂದು ವಿಶೇಷ.

ಇಂಥ ಬೃಹತ್ ಕ್ರೀಡಾಕೂಟವನ್ನು ಆಯೋಜಿಸುವುದು ಮತ್ತು ನಿಭಾಯಿಸುವುದು ಸವಾಲಿನ ಕೆಲಸವಾಗಿದ್ದು, ಭಾಗವಹಿಸಿದ ಅಥ್ಲೀಟ್ಗಳ ಸಂಖ್ಯೆಯ ಆಧಾರದಲ್ಲಿ ಇದು ವಾಸ್ತವವಾಗಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕಿಂತಲೂ ದೊಡ್ಡ ಪ್ರಮಾಣದ್ದು. ಇದರ ಆಯೋಜನೆಗೆ ಹಗಲಿರುಳು ಶ್ರಮಿಸುತ್ತಿರುವ ವ್ಯವಸ್ಥೆ ಬಗ್ಗೆ ಜನ ಅಚ್ಚರಿಯಿಂದ ನೋಡುವಂತಾಗಿದೆ.

"ಇದರ ಅಗಾಧತೆಯನ್ನು ನೋಡಿ; ಪ್ರತಿಯೊಂದು ಅಂಶಗಳನ್ನೂ ಯೋಜನಾಬದ್ಧವಾಗಿ ಹಾಗೂ ನಿಖರವಾಗಿ ಆಯೋಜಿಸಲಾಗಿದ್ದು, ಇಲಾಖೆಯ ದೊಡ್ಡ ತಂಡ ಇದರ ಯಶಸ್ಸಿಗೆ ಶ್ರಮಿಸುತ್ತಿದೆ" ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಶಾಲಾ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯದ ಚಿತ್ರಣವನ್ನೇ ಈ ಕ್ರೀಡಾಕೂಟ ಬದಲಿಸಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಮಾದರಿಯ ಕೂಟ, ಅಪೂರ್ವ ಬದ್ಧತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ನಿಜವಾಗಿಯೂ ವಿಶಿಷ್ಟ. ಮಿನಿಯೇಚರ್ ಒಲಿಂಪಿಕ್ಸ್ನಂಥ ಇಂಥ ಕೂಟವನ್ನು ಆಯೋಜಿಸುವ ಮೂಲಕ ವಿಶ್ವಕ್ಕೆ ಪ್ರಬಲ ನಿದರ್ಶನವನ್ನು ನೀಡುತ್ತಿದ್ದೇವೆ. ಪ್ರತಿಯೊಂದು ಮಗು ಕೂಡಾ ಪಾಲ್ಗೊಳ್ಳುವ ಮತ್ತು ಶ್ರೇಷ್ಠತೆಯನ್ನು ಮೆರೆಯುವ ಅವಕಾಶವನ್ನು ಕಲ್ಪಿಸಿಕೊಡುವುದು ನಮ್ಮ ಉದ್ದೇಶ" ಎಂದು ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News