ಪ್ರಯಾಗರಾಜ್ | ಯುಪಿಪಿಎಸ್‌ಸಿ ಪ್ರತಿಭಟನೆ ; ಆಯೋಗದ ಕಚೇರಿಗೆ ಎರಡನೇ ದಿನವೂ ಮುಂದುವರಿದ ಆಕಾಂಕ್ಷಿಗಳ ಮುತ್ತಿಗೆ

Update: 2024-11-12 15:25 GMT

PC ; PTI 

ಪ್ರಯಾಗರಾಜ್ : ಉತ್ತರ ಪ್ರದೇಶ ಲೋಕಸೇವಾ ಆಯೋಗ (ಯುಪಿಪಿಎಸ್‌ಸಿ)ವು ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆಗಳನ್ನು ಮಾಡಿರುವುದನ್ನು ಪ್ರತಿಭಟಿಸಿ ಆಕಾಂಕ್ಷಿಗಳು ಸೋಮವಾರ ಬೆಳಿಗ್ಗೆಯಿಂದ ಆಯೋಗದ ಕೇಂದ್ರ ಕಚೇರಿಗೆ ಹಾಕಿದ್ದ ಮುತ್ತಿಗೆಯು ಮಂಗಳವಾರವೂ ಮುಂದುವರಿದಿತ್ತು.

ಪಿಸಿಎಸ್-2024 ಮತ್ತು ಆರ್‌ಒ/ಎಆರ್‌ಒ ಪ್ರಿಲಿಮಿನರಿ ಪರೀಕ್ಷೆಗಳ ಆಕಾಂಕ್ಷಿಗಳು ಪರೀಕ್ಷೆಯನ್ನು ಎರಡು ದಿನಗಳಲ್ಲಿ ನಡೆಸುವ ಆಯೋಗದ ನಿರ್ಧಾರ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತಂದಿರುವ ಬದಲಾವಣೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

ಸಮಾಜವಾದಿ ಪಾರ್ಟಿಯ ವಿದ್ಯಾರ್ಥಿ ವಿಭಾಗ ಸಮಾಜವಾದಿ ಛಾತ್ರ ಸಭಾ ಮತ್ತು ಕಾಂಗ್ರೆಸ್‌ನ ಎನ್‌ಎಸ್‌ಯುಐನ ಹಲವಾರು ವಿದ್ಯಾರ್ಥಿ ನಾಯಕರು ಆಕಾಂಕ್ಷಿಗಳನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಸೋಮವಾರ ತಡರಾತ್ರಿ ಯುಪಿಪಿಸಿಸಿ ಕಾರ್ಯದರ್ಶಿ ಅಶೋಕ್ ಕುಮಾರ್, ಜಿಲ್ಲಾಧಿಕಾರಿ ರವೀಂದ್ರಕುಮಾರ್ ಮಂದರ್, ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ ಪಂತ ಮತ್ತು ಪೋಲಿಸ್ ಆಯುಕ್ತ ತರುಣ ಗಾಬಾ ಅವರು ಪ್ರತಿಭಟನಾಕಾರರನ್ನು ಭೇಟಿಯಾಗಿ ಅವರ ಲಾಭಕ್ಕಾಗಿಯೇ ಪರೀಕ್ಷಾ ವಿಧಾನದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಮನದಟ್ಟು ಮಾಡಲು ಪ್ರಯತ್ನಿಸಿದ್ದರಾದರೂ, ಅದಕ್ಕೆ ಸೊಪ್ಪು ಹಾಕದ ಆಕಾಂಕ್ಷಿಗಳು ಪ್ರತಿಭಟನೆಯನ್ನು ಮುಂದುವರಿಸಿದರು.

ಮಂಗಳವಾರವೂ ಜಿಲ್ಲಾಧಿಕಾರಿಗಳು ಆಕಾಂಕ್ಷಿಗಳನ್ನು ಭೇಟಿಯಾಗಿ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವಂತೆ ಮಾಡಲು ವಿಫಲ ಯತ್ನ ನಡೆಸಿದ್ದರು.

ಈ ನಡುವೆ ಲೋಪರಹಿತ ಪರೀಕ್ಷೆ ಮತ್ತು ಆಕಾಂಕ್ಷಿಗಳ ಅನುಕೂಲತೆ ತನ್ನ ಆದ್ಯತೆಯಾಗಿದೆ ಎಂದು ಯುಪಿಪಿಸಿಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News