ಶೋಕಾಸ್ ನೋಟಿಸ್, ವೀಡಿಯೊ ರೆಕಾರ್ಡಿಂಗ್: ಬುಲ್ಡೋಝರ್ ಕಾರ್ಯಾಚರಣೆಗೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಬುಲ್ಡೋಝರ್ ನ್ಯಾಯ ಕಾನೂನುಬಾಹಿರವಾಗಿದೆ ಎಂದು ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್, ಬುಲ್ಡೋಝರ್ ಕಾರ್ಯಾಚರಣೆಗೆ ಮಾರ್ಗಸೂಚಿ ಪ್ರಕಟಿಸಿದೆ. ಒಂದು ವೇಳೆ ಕಾನೂನು ಬಾಹಿರ ತೆರವು ಕಾರ್ಯಚರಣೆ ನಡೆಸಿದರೆ ಅಧಿಕಾರಿಗಳೇ ಹೊಣೆಗಾರರು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಕ್ರಮ ಕಟ್ಟಡಗಳನ್ನು ಕೆಡವುವ ಮುನ್ನ ಅನುಸರಿಸಬೇಕಾದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು:
► ಯಾವುದೇ ಆಸ್ತಿಯನ್ನು ನೆಲಸಮ ಮಾಡುವ ಮೊದಲು ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕು.
► ರಾತ್ರಿಯಲ್ಲಿ ಮಹಿಳೆಯರು, ಮಕ್ಕಳನ್ನು ಬೀದಿಗೆ ತಳ್ಳುವುದು ಸಮಂಜಸವಲ್ಲ, ಸ್ವಲ್ಪ ಸಮಯ ಕಾಲಾವಕಾಶ ನೀಡಿದರೆ “ಸ್ವರ್ಗ ಕುಸಿಯುವುದಿಲ್ಲ”́(ಆತುರ ಬೇಡ) ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
► ಸ್ಥಳೀಯ ಪುರಸಭೆಯ ಕಾನೂನುಗಳಲ್ಲಿ ಒದಗಿಸಲಾದ ಸಮಯಕ್ಕೆ ಅನುಗುಣವಾಗಿ 15 ದಿನಗಳ ಮೊದಲು ಪೂರ್ವ ಶೋಕಾಸ್ ನೋಟಿಸ್ ನೀಡದೆ ಯಾವುದೇ ತೆರವು ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
► ರಾಜ್ಯ ಮತ್ತು ಅಧಿಕಾರಿಗಳು ನಿರಂಕುಶ ಮತ್ತು ಅತಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ
► ನೋಟಿಸ್ ಅನ್ನು ನೋಂದಾಯಿತ ಅಂಚೆ ಮೂಲಕವೇ ಮಾಲಕರಿಗೆ ಕಳುಹಿಸಬೇಕು ಸೂಚನೆಯು ಅನಧಿಕೃತ ನಿರ್ಮಾಣದ ಸ್ವರೂಪ, ನಿಯಮಗಳ ಉಲ್ಲಂಘನೆ ಬಗ್ಗೆ ವಿವರಗಳು ಮತ್ತು ಕೆಡವುವಿಕೆಗೆ ಕಾರಣಗಳನ್ನು ಒಳಗೊಂಡಿರಬೇಕು.
► ಗೊತ್ತುಪಡಿಸಿದ ಪ್ರಾಧಿಕಾರವು ಆರೋಪಿಗಳಿಗೆ ವೈಯಕ್ತಿಕವಾಗಿ ವಿಚಾರಣೆಗೆ ಅವಕಾಶ ನೀಡಬೇಕು. ಅಂತಹ ವಿಚಾರಣೆಯ ನಡಾವಳಿಗಳನ್ನು ದಾಖಲಿಸಬೇಕು.
► ಸಾರ್ವಜನಿಕ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾದರೆ ಅಂತಹ ಸಮಯದಲ್ಲಿ ನಿರ್ದೇಶನ ಅನ್ವಯವಾಗುವುದಿಲ್ಲ.
► ಅಕ್ರಮ ಕಟ್ಟಡಗಳ ಕೆಡವುವ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಿಸಬೇಕು, ಕಟ್ಟಡ ಕೆಡವುವ ಕುರಿತ ವರದಿಯನ್ನು ಪಾಲಿಕೆ ಆಯುಕ್ತರಿಗೆ ರವಾನಿಸಬೇಕು ಎಂದು ಕೋರ್ಟ್ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.
ಇದಲ್ಲದೆ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು ಎಂದು ಪೀಠವು ಎಚ್ಚರಿಕೆ ನೀಡಿದೆ.
ಒಂದು ವೇಳೆ ತೆರವು ಕಾರ್ಯಾಚರಣೆಯಲ್ಲಿ ನಿಯಮಾವಳಿ ಉಲ್ಲಂಘನೆ ಕಂಡುಬಂದರೆ, ಕೆಡವಲಾದ ಆಸ್ತಿಯ ಮರುಪಾವತಿಗೆ ಅವರೇ ಹೊಣೆಯಾಗುತ್ತಾರೆ ಎಂದು ಅಧಿಕಾರಿಗಳಿಗೆ ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ತಗಲುವ ವೆಚ್ಚವನ್ನು ಅಧಿಕಾರಿಗಳ ವೇತನದಿಂದ ವಸೂಲಿ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಎಲ್ಲಾ ಸ್ಥಳೀಯ ಮುನ್ಸಿಪಲ್ ಅಧಿಕಾರಿಗಳು ಮೂರು ತಿಂಗಳೊಳಗೆ ಈ ಬಗ್ಗೆ ಡಿಜಿಟಲ್ ಪೋರ್ಟಲ್ ಸ್ಥಾಪಿಸಬೇಕು. ಅದರಲ್ಲಿ ಶೋಕಾಸ್ ನೊಟೀಸ್ ಮತ್ತು ಅಕ್ರಮ ಕಟ್ಟಡಗಳ ವಿವರಗಳನ್ನು ದಾಖಲಿಸಬೇಕು ಎಂದು ಕೋರ್ಟ್ ಹೇಳಿದೆ.
ಹಿರಿಯ ವಕೀಲರಾದ ಡಾ ಅಭಿಷೇಕ್ ಮನು ಸಿಂಘ್ವಿ, ಸಿಯು ಸಿಂಗ್, ಎಂಆರ್ ಶಂಶಾದ್, ನಿತ್ಯಾ ರಾಮಕೃಷ್ಣನ್, ವಕೀಲರಾದ ಪ್ರಶಾಂತ್ ಭೂಷಣ್, ಮೊಹಮ್ಮದ್ ನಿಝಾಮ್ ಪಾಷಾ, ಫೌಜಿಯಾ ಶೇಖ್, ವಕೀಲ ರಶ್ಮಿ ಸಿಂಗ್ ಮುಂತಾದವರ ಸಲಹೆಗಳಿಗೆ ನ್ಯಾಯಾಲಯ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಹಿರಿಯ ವಕೀಲ ನಚಿಕೇತ ಜೋಶಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಕಾರವನ್ನು ನ್ಯಾಯಾಲಯ ಶ್ಲಾಘಿಸಿದೆ.