ಉತ್ತರಪ್ರದೇಶ : ಪಿಆರ್‌ಡಿ ಯೋಧನ ಥಳಿಸಿ ಹತ್ಯೆ
ಗೋರಖ್‌ಪುರ : ಉತ್ತರಪ್ರದೇಶದ ಕುಶಿನಗರ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಾಂತೀಯ ರಕ್ಷಾ ದಳ (ಪಿಆರ್‌ಡಿ)ದ ಯೋಧನೋರ್ವನನ್ನು ಕಬ್ಬಿಣದ ರಾಡ್ ನಿಂದ ಥಳಿಸಿ ಹತ್ಯೆಗೈಯಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಈ ಘಟನೆ ಚಿಟೋನಿ ಪೊಲೀಸ್ ಹೊರ ಠಾಣೆಯಿಂದ 100 ಮೀಟರ್ ಒಳಗಡೆ ಶನಿವಾರ ರಾತ್ರಿ ನಡೆದಿದೆ. ಮೃತಪಟ್ಟ ಯೋಧನನ್ನು ರಾಮಕೃಷ್ಣ ತಿವಾರಿ (58) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಮಾಕಾಂತ್ ತಿವಾರಿಯನ್ನು ಥಳಿಸಿ ಹತೆಗೈದ ವ್ಯಕ್ತಿಯನ್ನು ವಿಪಿನ್ ವರ್ಮಾ ಎಂದು ಗುರುತಿಸಲಾಗಿದೆ. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈತ ಹಾಗೂ ರಮಾಕಾಂತ್ ತಿವಾರಿ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭ ವಿಪಿನ್ ವರ್ಮಾ ಕಬ್ಬಿಣದ ರಾಡ್‌ನಿಂದ ರಮಾಕಾಂತ್ ತಿವಾರಿ ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ರಮಾಕಾಂತ್ ತಿವಾರಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ವಿಪಿನ್ ವರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.
ಖಡ್ಡಾ ಪೊಲೀಸ್ ಠಾಣಾ ಪ್ರದೇಶದ ಕರದಹ ತಿವಾರಿ ಟೋಲಾದ ನಿವಾಸಿ ರಮಾಕಾಂತ್ ತಿವಾರಿಯನ್ನು ಕಾನ್ಸ್‌ಟೇಬಲ್ ಆನಂದ್ ತಿವಾರಿ ಹಾಗೂ ಇನ್ನೋರ್ವ ಪಿಆರ್‌ಡಿ ಯೋಧನೊಂದಿಗೆ ಚಿಟೋನಿ ಬಝಾರ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಪಿಆರ್‌ಡಿ ಯೋಧ ರಮಾಖಾಂತ್ ತಿವಾರಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಆದರೆ, ವಿಪಿನ್ ವರ್ಮಾ ಆತನನ್ನು ಅಟ್ಟಿಸಿಕೊಂಡು ಹೋಗಿ ಕಬ್ಬಿಣದ ರಾಡ್‌ನಿಂದ ಥಳಿಸಿದ್ದಾನೆ. ಘಟನೆಯ ಬಳಿಕ ಪಿಆರ್‌ಡಿ ಯೋಧ ಪೊಲೀಸರು ಹಾಗೂ ತಿವಾರಿ ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.