ಉತ್ತರಪ್ರದೇಶ ಉಪಚುನಾವಣೆ | ಮತಗಟ್ಟೆಗೆ ತೆರಳುವಾಗ ಪೊಲೀಸರು ಪಿಸ್ತೂಲು ತೋರಿಸಿದರೂ ಧೈರ್ಯದಿಂದ ನಿಂತಿದ್ದ ಮುಸ್ಲಿಂ ಮಹಿಳೆ ; ಸಮಾಜವಾದಿ ಪಕ್ಷದಿಂದ ಪ್ರಶಂಸೆ
ಲಕ್ನೋ : ಉತ್ತರಪ್ರದೇಶದ ಮುಜಾಫರ್ನಗರ ಜಿಲ್ಲೆಯ ಮೀರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ತೆರಳುತ್ತಿದ್ದಾಗ ಪೊಲೀಸರು ಪಿಸ್ತೂಲ್ ತೋರಿಸಿ ಬೆದರಿಸಿದರೂ ಮಹಿಳೆಯೋರ್ವರು ಧೈರ್ಯದಿಂದ ಮುಂದೆ ನಿಂತಿದ್ದ ಫೋಟೋ ವೈರಲ್ ಆಗಿತ್ತು. ಮಹಿಳೆಗೆ ಸಮಾಜವಾದಿ ಪಕ್ಷವು ಪ್ರಶಂಸಿದ್ದು, ಅವರನ್ನು ಸನ್ಮಾನಿಸುವುದಾಗಿ ಹೇಳಿಕೊಂಡಿದೆ.
ಮತಗಟ್ಟೆಗೆ ತೆರಳುತ್ತಿದ್ದ ಕಕ್ರೌಲಿಯ ನಿವಾಸಿ ತೌಹೀದಾ ಎಂದು ಗುರುತಿಸಲಾದ ಮಹಿಳೆಗೆ ಕಕ್ರೌಲಿ ಎಸ್ಎಚ್ಒ ರಾಜೀವ್ ಶರ್ಮಾ ಪಿಸ್ತೂಲ್ ತೋರಿಸಿ ಬೆದರಿಸುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು.
ಉತ್ತರಪ್ರದೇಶದ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ನಡೆದ ಉಪಚುನಾವಣೆ ವೇಳೆ ಹಲವು ಸ್ಥಳಗಳಲ್ಲಿ ಮುಸ್ಲಿಮರು ತಮ್ಮ ಹಕ್ಕು ಚಲಾಯಿಸದಂತೆ ಪೊಲೀಸರು ತಡೆದಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದ ಬೆನ್ನಲ್ಲೇ ಈ ಪೋಟೋ ವೈರಲ್ ಆಗಿತ್ತು.
ಮತದಾನದ ವೇಳೆ ಹಿಂಸಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಪೊಲೀಸರು ತೌಹೀದಾ ಅವರ ಮೇಲೆ ಕೂಡ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಜಿಯಾ ಚೌಧರಿ ಮತ್ತು ಇತರ ಸ್ಥಳೀಯ ಮುಖಂಡರು ಫೋಟೋ ವೈರಲ್ ಬೆನ್ನಲ್ಲೇ ತೌಹೀದಾ ಅವರನ್ನು ಭೇಟಿ ಮಾಡಿ ಅಖಿಲೇಶ್ ಯಾದವ್ ನಿಮ್ಮನ್ನು ಸನ್ಮಾನಿಸಲಿದ್ದಾರೆ ಎಂದು ಹೇಳಿದ್ದಾರೆ
ʼನನ್ನನ್ನು ಮತ ಚಲಾಯಿಸದಂತೆ ಪೊಲೀಸರು ತಡೆದಿದ್ದಾರೆ. ನಾನು ಗುಂಡುಗಳಿಗೆ ಹೆದರುವುದಿಲ್ಲʼ ಎಂದು ತೌಹೀದಾ ಅವರು ಹೇಳಿದ್ದಾರೆ.
ಪೊಲೀಸರು ಮತದಾನಕ್ಕೆ ತೆರಳುತ್ತಿದ್ದ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರ ಪರ್ದಾ ತೆಗೆಸಿದ್ದಾರೆ ಮತ್ತು ಮತದಾನದ ಕೇಂದ್ರಗಳಿಗೆ ಹೋಗದಂತೆ ತಡೆದಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿತ್ತು. ಈ ಕುರಿತ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.