ಮೀನುಗಾರರ ಬೋಟ್ ಗೆ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆ ಢಿಕ್ಕಿ; ಇಬ್ಬರು ಮೀನುಗಾರರು ನಾಪತ್ತೆ
ಪಣಜಿ: 13 ಮಂದಿ ಮೀನುಗಾರರಿದ್ದ ಭಾರತೀಯ ಮೀನುಗಾರಿಕೆ ಬೋಟ್ ಗೋವಾ ಕರಾವಳಿ ಬಳಿ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆಗೆ ಢಿಕ್ಕಿ ಹೊಡೆದಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಬೆನ್ನಿಗೇ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡ ಭಾರತೀಯ ನೌಕಾಪಡೆಯು, ನಾಪತ್ತೆಯಾದವರ ಪತ್ತೆಗೆ ಆರು ಹಡಗುಗಳು ಹಾಗೂ ಎರಡು ವಿಮಾನಗಳನ್ನು ನಿಯೋಜಿಸಿದೆ. ಈವರೆಗೆ 11 ಮಂದಿ ಮೀನುಗಾರರನ್ನು ರಕ್ಷಿಸಲಾಗಿದ್ದು, ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ.
ಮಾರ್ತೋಮ ಎಂಬ ಹೆಸರಿನ ಬೋಟ್ ಗೋವಾ ಕರಾವಳಿಯಿಂದ ಸುಮಾರು 70 ನಾಟಿಕಲ್ ಮೈಲು ದೂರದಲ್ಲಿ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಗೆ ಢಿಕ್ಕಿ ಹೊಡೆಯಿತು ಎಂದು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
“ನಾಪತ್ತೆಯಾಗಿರುವ ಉಳಿದಿಬ್ಬರು ಮೀನುಗಾರರ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಮೇರಿಟೈಮ್ ರೆಸ್ಕ್ಯೂ ಕೋ-ಆರ್ಡಿನೇಷನ್ ಸೆಂಟರ್ ಮುಂಬೈನೊಂದಿಗೆ ಸಮನ್ವಯ ಸಾಧಿಸಲಾಗಿದೆ. ಗೋವಾ ಕಾವಲು ಪಡೆ ಸೇರಿದಂತೆ ಹೆಚ್ಚುವರಿ ರಕ್ಷಣಾ ಪಡೆಗಳನ್ನು ರಕ್ಷಣಾ ಪ್ರಯತ್ನಗಳನ್ನು ತ್ವರಿತಗೊಳಿಸಲು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ” ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
“ಘಟನೆಯ ಕಾರಣವನ್ನು ತನಿಖೆ ಮಾಡಲಾಗುವುದು” ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.