ಅಂತ್ಯಕ್ರಿಯೆಗೆ ಕೆಲವೇ ಕ್ಷಣದ ಮೊದಲು ಪ್ರಜ್ಞೆ ಪಡೆದುಕೊಂಡ ಯುವಕ!; ಮೂವರು ವೈದ್ಯರ ಅಮಾನತು
ಜೈಪುರ: ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದ ಯುವಕನೋರ್ವ ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳ ಮೊದಲು ಪ್ರಜ್ಞೆ ಬಂದು ಜೀವಂತವಾಗಿರುವುದು ಕಂಡು ಬಂದಿದ್ದು, ಘಟನೆಗೆ ಸಂಬಂಧಿಸಿ ಮೂವರು ವೈದ್ಯರನ್ನು ಅಮಾನತುಗೊಳಿಸಲಾಗಿದೆ.
ಪೊಲೀಸರ ಪ್ರಕಾರ, ಗುರುವಾರ ಆರೋಗ್ಯ ಹದಗೆಟ್ಟ ಹಿನ್ನೆಲೆ ರೋಹಿತಾಶ್ ಕುಮಾರ್(25) ಎಂಬವರನ್ನು ಜುಂಜುನುವಿನ ಬಿಡಿಕೆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ 2 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿ ಮೃತದೇಹವನ್ನು ಶವಾಗಾರದಲ್ಲಿರಿಸಿದ್ದರು. ಬಳಿಕ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿತ್ತು.
ಅನಾಥನಾಗಿದ್ದ ರೋಹಿತಾಶ್ ಕುಮಾರ್ ಕಿವುಡ ಮತ್ತು ಮೂಕನಾಗಿದ್ದರು. ಅವರು ಆಶ್ರಯ ನಿಲಯದಲ್ಲಿ ವಾಸಿಸುತ್ತಿದ್ದರು. ಇದೀಗ ಅವರನ್ನು ಮತ್ತೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ವೈದ್ಯರ ನಿರ್ಲಕ್ಷ್ಯವನ್ನು ಗಮನಿಸಿದ ಜುಂಜುನು ಜಿಲ್ಲಾಧಿಕಾರಿ ರಾಮಾವತಾರ್ ಮೀನಾ, ವೈದ್ಯರಾದ ಡಾ. ಯೋಗೇಶ್ ಜಾಖರ್, ಡಾ.ನವನೀತ್ ಮೀಲ್ ಮತ್ತು ಡಾ. ಸಂದೀಪ್ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದ್ದು, ವೈದ್ಯಕೀಯ ಇಲಾಖೆಯ ಕಾರ್ಯದರ್ಶಿಗೂ ಮಾಹಿತಿ ನೀಡಲಾಗಿದೆ ಎಂದು ಮೀನಾ ತಿಳಿಸಿದ್ದಾರೆ.