ʼಅತಿಕ್ರಮಣʼ ತೆರವಿಗೆ ಬುಲ್ಡೋಜರ್‌ನೊಂದಿಗೆ ಬಂದು ಬಂಧಿಸಲ್ಪಟ್ಟ ಬಿಜೆಪಿ ಶಾಸಕ

Update: 2024-11-22 11:29 GMT

ಸಾಂದರ್ಭಿಕ ಚಿತ್ರ | PTI 

ಭೋಪಾಲ: ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ದೇವಸ್ಥಾನದ ಸಮೀಪದ ಗಡಿ ಗೋಡೆಯನ್ನು ಕೆಡವಲು ಬುಲ್ಡೋಜರ್‌ನೊಂದಿಗೆ ಬಂದು ಪೋಲಿಸರಿಂದ ಬಂಧಿಸಲ್ಪಟ್ಟಿದ್ದ ಬಿಜೆಪಿ ಶಾಸಕ ಪ್ರದೀಪ ಪಟೇಲ್ ‘ನಾನು ಮತ್ತೆ ಅದನ್ನು ಮಾಡುತ್ತೇನೆ’ ಎಂದು ಅಬ್ಬರಿಸಿದ್ದಾರೆ.

ನ.19ರಂದು ದೇವ್ರಾ ಗ್ರಾಮಕ್ಕೆ ಬುಲ್ಡೋಜರ್‌ನೊಂದಿಗೆ ಬಂದಿದ್ದ ಪಟೇಲ್ ಮತ್ತು ಅವರ ಬೆಂಬಲಿಗರು ಮಹಾದೇವನ್ ದೇವಸ್ಥಾನದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸುವುದಾಗಿ ಮತ್ತು ನಿವಾಸಿಗಳನ್ನು ಒಕ್ಕಲೆಬ್ಬಿಸುವುದಾಗಿ ಬೆದರಿಕೆಯೊಡ್ಡಿದ್ದರು. ಇದು ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣವಾಗಿತ್ತು. ಬುಲ್ಡೋಜರ್ ಗಡಿ ಗೋಡೆಯನ್ನು ಸಮೀಪಿಸುತ್ತಿದ್ದಂತೆ ಜಮೀನಿನಲ್ಲಿ ವಾಸವಿದ್ದ ಜನರು ಕಲ್ಲುತೂರಾಟ ಆರಂಭಿಸಿದ್ದು, ಸುಮಾರು 4-5 ಜನರು ಗಾಯಗೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕ ಪಟೇಲ್‌ರನ್ನು ಪೋಲಿಸರು ಬಂಧಿಸಿದ್ದರು.

ಬಿಡುಗಡೆಗೊಂಡ ಬಳಿಕ ಪಟೇಲ್ ದೇವಸ್ಥಾನದ ಭೂಮಿಯನ್ನು ಅತಿಕ್ರಮಿಸಿರುವ ನಿರ್ಮಾಣವನ್ನು ನೆಲಸಮಗೊಳಿಸುವುದಾಗಿ ಹೇಳಿದ್ದಾರೆ.

ರವಿವಾರ ಸ್ಥಳೀಯ ನಾಯಕ ಸಂತೋಷ ತಿವಾರಿ ದೇವಸ್ಥಾನದ ಬಳಿಕ ಒಂಭತ್ತು ಎಕರ ಭೂಮಿಯಲ್ಲಿನ ಅತಿಕ್ರಮಣ ತೆರವಿಗೆ ಬೇಡಿಕೆಯೊಂದಿಗೆ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದರು.

ಸ್ಥಳೀಯ ಕಂದಾಯ ನ್ಯಾಯಾಲಯವು ಅತಿಕ್ರಮಣ ತೆರವಿಗೆ ಆದೇಶಿದ್ದರೂ ಆಡಳಿತವು ಅದನ್ನು ಪಾಲಿಸಿಲ್ಲ ಎಂದು ಪಟೇಲ್ ಹೇಳಿದರು.

ಇಡೀ ವಿವಾದವು ದೇವಸ್ಥಾನದ ಸಮೀಪದ ಗಡಿ ಗೋಡೆಯ ನೆಲಸಮವನ್ನು ಕೇಂದ್ರೀಕರಿಸಿದೆ. ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ 15 ದಿನಗಳ ನೋಟಿಸ್ ನೀಡಲಾಗಿದೆ. ಸ್ಥಳೀಯ ನ್ಯಾಯಾಲಯವು ಅತಿಕ್ರಮಣ ತೆರವಿಗೆ ಆದೇಶಿಸಿದೆ. ಹಿಂದು ಮತ್ತು ಮುಸ್ಲಿಮ್ ಎರಡೂ ಸಮುದಾಯಗಳು ಜನರು ವಾಸವಿರುವ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ ಎಂದು ಮೌಗಂಜ್ ಜಿಲ್ಲಾಧಿಕಾರಿ ಅಜಯ ಶ್ರೀವಾಸ್ತವ ಹೇಳಿದರು.

’ಅತಿಕ್ರಮಿತ ಭೂಮಿಯಲ್ಲಿ ಮನೆಗಳನ್ನು ಕಟ್ಟಿಕೊಂಡವರಿಗೆ ಸ್ಥಳೀಯ ನ್ಯಾಯಾಲಯಗಳು ಈಗಾಗಲೇ ಬೇರೆ ಕಡೆ ಜಮೀನು ಮಂಜೂರು ಮಾಡಿವೆ,ಆದರೆ ನಿವಾಸಿಗಳು ಇನ್ನೂ ಜಾಗ ಖಾಲಿ ಮಾಡಿಲ್ಲ. ನಾನು ಅದನ್ನು ತೆರವುಗೊಳಿಸಲೇಬೇಕಿದೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್ ಹೇಳಿದರು.

ವಿವಾದಿತ ಪ್ರದೇಶವನ್ನು ಪೋಲಿಸರು ನಿರ್ಬಂಧಿಸಿದ್ದು,ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಭಾರೀ ಬಂದೋಬಸ್ತ್ ಏರ್ಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News