ಮಣಿಪುರ: ವಿದ್ಯಾರ್ಥಿಗಳಿಬ್ಬರ ಮೃತದೇಹಗಳ ಚಿತ್ರ ಜಾಲತಾಣಗಳಲ್ಲಿ ವೈರಲ್

Update: 2023-09-26 05:02 GMT

Photo: NDtv

ಇಂಫಾಲ: ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಕಳೆದ ಜುಲೈ ತಿಂಗಳಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಈಗಾಗಲೇ ಹಿಂಸಾಕೃತ್ಯಗಳಿಂದ ಜರ್ಜರಿತವಾಗಿರುವ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ದೇಹಗಳು ಇನ್ನೂ ಪತ್ತೆಯಾಗಿಲ್ಲವಾದರೂ, ಸಿಬಿಐ ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹಿಂಸಾಕೃತ್ಯಗಳ ವಿರುದ್ಧ ತಕ್ಷಣದ ಹಾಗೂ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.

ಮೀಟಿ ಸಮುದಾಯಕ್ಕೆ ಸೇರಿದ ಹಿಜಾಮ್ ಲಿಂಗ್ತೋಂಗಂಬಿ (17) ಮತ್ತು ಫಿಜಮ್ ಹೇಮಜಿತ್ (20) ಎಂಬ ವಿದ್ಯಾರ್ಥಿಗಳು ಸಶಸ್ತ್ರ ಗುಂಪುಗಳ ತಾತ್ಕಾಲಿಕ ಡೇರೆಗಳ ಕಾಂಪೌಂಡ್ನಲ್ಲಿ ಕುಳಿತಿರುವುದನ್ನು ಚಿತ್ರಗಳು ಬಿಂಬಿಸಿವೆ. ಲಿಂಗ್ತೋಂಗಂಬಿ ಎಂಬ ವಿದ್ಯಾರ್ಥಿನಿ ಬಿಳಿಯ ಟಿ-ಶರ್ಟ್ ಧರಿಸಿದ್ದರೆ, ಹೇಮಜಿತ್ ಹಿಂಬದಿಗೆ ಬ್ಯಾಕ್ ಹಾಕಿಕೊಂಡಿದ್ದು, ಗೆರೆಗಳಿರುವ ಅಂಗಿ ಧರಿಸಿದ್ದಾನೆ. ಇವರ ಹಿಂದೆ ಬಂದೂಕು ಹಿಡಿದುಕೊಂಡಿರುವ ಇಬ್ಬರು ಸ್ಪಷ್ಟವಾಗಿ ಕಾಣಿಸುತ್ತಿದ್ದಾರೆ. ಮುಂದಿನ ಫೋಟೊದಲ್ಲಿ ಇವರ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಾಣಿಸುತ್ತಿದೆ.

ಈ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರಿಗೆ ಈ ಪ್ರಕರಣ ಬೇಧಿಸಲು ಏಕೆ ಇಷ್ಟು ಕಾಲ ಬೇಕಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಕಳೆದ ಜುಲೈನಲ್ಲಿ ಮಳಿಗೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಇರುವ ದೃಶ್ಯ ಸೆರೆಯಾಗಿದೆ. ಆದರೆ ಅವರನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ.

ಅತ್ಯಾಧುನಿಕ ಸೈಬರ್ ವಿಧಿವಿಜ್ಞಾನ ಸಾಧನಗಳನ್ನು ಬಳಸಿಕೊಂಡು ಮೃತದೇಹಗಳ ಹಿಂದಿರುವ ಇಬ್ಬರು ಬಂದೂಕುಧಾರಿಗಳ ಸ್ಪಷ್ಟಚಿತ್ರವನ್ನು ಪರಿಶೀಲಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News