ಮಣಿಪುರ: ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣ: ಸಿಬಿಐನಿಂದ ನಾಲ್ವರ ಬಂಧನ
ಇಂಫಾಲ: ಮಣಿಪುರದಲ್ಲಿ ಜುಲೈ ತಿಂಗಳಲ್ಲಿ ಇಬ್ಬರು ವಿದ್ಯಾರ್ಥಿಗಳ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ಮಂಡಳಿ (ಸಿಬಿಐ) ರವಿವಾರ ನಾಲ್ವರನ್ನು ಬಂಧಿಸಿದೆ.
ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಬಂಧಿತ ಆರೋಪಿಗಳೆಂದು ಸಿಬಿಐ ತಿಳಿಸಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ವಿದ್ಯಾರ್ಥಿನಿಯರನ್ನು ಇಂಫಾಲದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆಯೆಂದು ತಿಳಿದುಬಂದಿದೆ.
ಇಂದು ಬಂಧಿತರಾದ ನಾಲ್ವರು ಆರೋಪಿಗಳನ್ನು ಪಾವೊ ಮಿನಿಲುಮ್ ಹಾವೊಕಿಪ್, ಮಾಲ್ಸಾವುನ್ ಹಾವೊಕಿಪ್, ಲ್ಹಿಂಗ್ನೆಚೊಂಗ್ ಬೈಟೆ ಹಾಗೂ ಟಿನ್ನೈಖೋಲ್ ಎಂದು ಗುರುತಿಸಲಾಗಿದ್ದು, ಅವರನ್ನು ಅಸ್ಸಾಂನ ಗುವಾಹಟಿಗೆ ಕೊಂಡೊಯ್ಯಲಾಗಿದೆ. ಬಂಧಿತ ಆರೋಪಿ ಲ್ಹಿಂಗ್ನೆಚೊಂಗ್ ಬೈಟೆ, ಕೊಲೆಯಾದ ವಿದ್ಯಾರ್ಥಿನಿಯ ಗೆಳತಿಯೆಂದು ತಿಳಿದುಬಂದಿದೆ.
ಜುಲೈನಲ್ಲಿ ನಾಪತ್ತೆಯಾದ ಓರ್ವ ವಿದ್ಯಾರ್ಥಿನಿ ಹಾಗೂ ಇನ್ನೋರ್ವ ವಿದ್ಯಾರ್ಥಿಯ ಮೃತದೇಹಗಳ ಭಾವಚಿತ್ರ ಸೆ.26ರಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಬಳಿಕ ಮಣಿಪುರ ಸರಕಾರ ತಕ್ಷಣವೇ ಕಾರ್ಯಪ್ರವೃತ್ತವಾಗಿ ಹಂತಕರ ಪತ್ತೆ ಕಾರ್ಯಾಚರಣೆ ಆರಂಭಿಸಿತ್ತು.
ಪೊಲೀಸರು ಹಾಗೂ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ನಾಲ್ವರು ಶಂಕಿತ ಆರೋಪಿಗಳನ್ನು ಚುರಾಚಂದ್ಪುರ ಗುಡ್ಡಗಾಡು ಜಿಲ್ಲೆಯಿಂದ ಬಂಧಿಸಲಾಗಿತ್ತು. ಮೇ 3ರಂದು ಭೀಕರ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದ ಈ ಜಿಲ್ಲೆಯಲ್ಲಿ ಹಲವಾರು ಕುಕಿ ಉಗ್ರಗಾಮಿ ಸಂಘಟನೆಗಳು ಕಾರ್ಯಾಚರಿಸುತ್ತಿವೆ.
ಆರೋಪಿಗಳನ್ನು ಬಂಧಿಸಿದ ತಕ್ಷಣವೇ ಅವರನ್ನು ವಿಮಾನನಿಲ್ದಾಣಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿಯೇ ಕಾಯುತ್ತಿದ್ದ ಸಿಬಿಐ ತಂಡವು ಅವರನ್ನು 5.45ರ ವಿಮಾನದಲ್ಲಿ ಗೌಹಾಟಿಗೆ ಕೊಂಡೊಯ್ಯಿತು. ಆರೋಪಿಗಳನ್ನು ಬಂಧಿಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಕೆಲವು ಜನರು ವಿಮಾನನಿಲ್ದಾಣದೆಡೆಗೆ ಧಾವಿಸಲು ಯತ್ನಿಸಿದರೆಂದು ಮೂಲಗಳು ತಿಳಿಸಿವೆ.
ಶಂಕಿತ ಉಗ್ರ ಎನ್ಐಎ ವಶಕ್ಕೆ
ಕಳೆದ ಜೂನ್ ೨೧ರಂದು ಮಣಿಪುರದ ಕ್ವಾಕ್ಟಾಎಂಬಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಮೂವರು ನಾಗರಿಕರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ಶನಿ ಶಂಕಿತ ಉಗ್ರನೊಬ್ಬನನ್ನು ಶನಿವಾರ ಬಂಧಿಸಿರುವುದಾಗಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಸೈಮಿನ್ಲುನ್ ಗಾಂಗ್ಟೆ ಬಂಧಿತ ಆರೋಪಿಯಾಗಿದ್ದು, ಆತನ ಕ್ವಾಕ್ಟಾ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬನಾಗಿದೆ. ಆತನನ್ನು ದಿಲ್ಲಿಗೆ ತರಲಾಗಿದ್ದು, ವಿಚಾರಣೆ ನಡೆಯುತ್ತಿದೆ .
ಬಂಧಿತ ಉಗ್ರ ಸೈಮಿನ್ಲುನ್ ಗಾಂಗ್ಟೆ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ಗಳಲ್ಲಿ ನೆಲೆಸಿರುವ ಚಿನ್-ಕುಕಿ-ಮಿರೆ ಉಗ್ರಗಾಮಿ ಗುಂಪುಗಳ ಜೊತೆ ಶಾಮೀಲಾಗಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದನೆಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.