ಮಣಿಪುರ ಹಿಂಸಾಚಾರ| ಅಸಮರ್ಥ ಮುಖ್ಯಮಂತ್ರಿ ಬಿರೇನ್ ಸಿಂಗ್ ರನ್ನು ವಜಾಗೊಳಿಸಿ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ಮಣಿಪುರ ಹಿಂಸಾಚಾರದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಣಿಪುರದ ಬಿಜೆಪಿಯ ಅಸಮರ್ಥ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
‘‘ಮಣಿಪುರದ ಜನರು ಕಳೆದ 147 ದಿನಗಳಿಂದ ಸಂತ್ರಸ್ತರಾಗುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಣಿಪುರಕ್ಕೆ ಭೇಟಿ ನೀಡಲು ಸಮಯ ಸಿಗುತ್ತಿಲ್ಲ. ಈ ಹಿಂಸಾಚಾರದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿದ ಭಯಾನಕ ಭಾವಚಿತ್ರ ದೇಶದ ಮನಸ್ಸನ್ನು ಮತ್ತೊಮ್ಮೆ ಕಲಕಿದೆ. ಈ ಹಿಂಸಾಚಾರದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಅಸ್ತ್ರವಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ’’ ಎಂದು ಖರ್ಗೆ ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.
‘‘ಸುಂದರ ರಾಜ್ಯವಾಗಿದ್ದ ಮಣಿಪುರ ಈಗ ಯುದ್ಧ ಭೂಮಿಯಾಗಿ ಪರಿವರ್ತನೆಯಾಗಿದೆ. ಇದಕ್ಕೆ ಕಾರಣ ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ ಅವರು ಅಸಮರ್ಥ ಬಿಜೆಪಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರನ್ನು ವಜಾಗೊಳಿಸಬೇಕು. ಮುಂದೆ ಯಾವುದೇ ಪ್ರಕ್ಷುಬ್ದತೆ ನಡೆಯದಂತೆ ತಡೆಯಲು ಇರುವ ಏಕೈಕ ಮಾರ್ಗ ಇದಾಗಿದೆ’’ ಎಂದು ಹೇಳಿದ್ದಾರೆ. ಮಣಿಪುರದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಭಾವಚಿತ್ರ ವೈರಲ್ ಆದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಈ ಹೇಳಿಕೆ ನೀಡಿದ್ದಾರೆ.
ಇದಕ್ಕಿಂತ ಮೊದಲು ಮಣಿಪುರ ಹಿಂಸಾಚಾರದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ (ಸಂವಹನದ ಉಸ್ತುವಾರಿ) ಜೈರಾಮ್ ರಮೇಶ್, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿ ಅವರಿಗೆ ಒಂದು ದಿನ ಕೂಡ ಸಮಯ ಸಿಗುತ್ತಿಲ್ಲ ಯಾಕೆ ಎಂಬುದು ನನಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ‘‘ಪ್ರಧಾನಿ ಅವರು ವಿವಿಧ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದಾರೆ. ಅಲ್ಲಿ ತಮ್ಮ ಸುಳ್ಳು, ನಿಂದನೆ, ಅವಮಾನದ ಟ್ರೇಡ್ ಮಾರ್ಕ್ಗಳ ಜಾಡನ್ನು ಬಿಟ್ಟು ಹೋಗುತ್ತಿದ್ದಾರೆ. ಅವರಿಗೆ ಒಂದು ದಿನ ಮಣಿಪುರಕ್ಕೆ ಭೇಟಿ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ನನಗೆ ತಿಳಿಯುತ್ತಿಲ್ಲ’’ ಎಂದು ಜೈರಾಮ್ ರಮೇಶ್ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.