ಮಣಿಪುರ ಹಿಂಸಾಚಾರ ವಿಶ್ವಸಂಸ್ಥೆ ವರದಿ ಪೂರ್ವಾಗ್ರಹಪೀಡಿತ: ಭಾರತ ಟೀಕೆ
Manipur violence UN report biased: India criticized
ಹೊಸದಿಲ್ಲಿ: ಮಣಿಪುರದಲ್ಲಿ ನಡೆದಿದೆಯೆನ್ನಲಾದ ಮಾನವಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಕುರಿತಾ ವಿಶ್ವಸಂಸ್ಥೆ ತಜ್ಞರ ವರದಿಯು ಅನಪೇಕ್ಷಿತ, ಪೂರ್ವಾಗ್ರಹಪೀಡಿತ ಮತ್ತು ತಪ್ಪುದಾರಿಗೆಳೆಯುವಂತಹದ್ದಾಗಿದೆ’’ ಎಂದು ಭಾರತವು ಪ್ರತಿಕ್ರಿಯಿಸಿದೆ.
ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಈಗ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಮಾನವಹಕ್ಕುಗಳ ಹೈಕಮಿಶನರ್ ಕಾರ್ಯಾಲಯದ ವಿಶೇಷ ಪ್ರಕ್ರಿಯಾ ಶಾಖೆಗೆ ಸಲ್ಲಿಸಿದ ಟಿಪ್ಪಣಿಯಲ್ಲಿ ತಿಳಿಸಿದೆ. ಕಾನೂನುಬಾಹಿರ ಹತ್ಯೆಗಳು, ಮನೆಧ್ವಂಸ, ಬಲವಂತದ ಸ್ಥಳಾಂತರ, ಚಿತ್ರಹಿಂಸೆ ಹಾಗೂ ಕೆಟ್ಟದಾಗಿ ನಡೆಸಿಕೊಳ್ಳುವುದು ಸೇರಿದಂತೆ ಮಣಿಪುರದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿವೆಯೆಂದು ಸೋಮವಾರ ವಿಶ್ವಸಂಸ್ಥೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ವಯೋವರ್ಗದ ನೂರಾರು ಮಹಿಳೆಯರು ಹಾಗೂ ಬಾಲಕಿಯರನ್ನು ಅದರಲ್ಲೂ ಬಹುತೇಕವಾಗಿ ಜನಾಂಗೀಯ ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಪಂಗಡದವರನ್ನು ಗುರಿಯಿರಿಸಿ ಲಿಂಗಾಧಾರಿತ ಹಿಂಸಾಚಾರವನ್ನು ನಡೆಸಲಾಗಿದೆ ಎಂದು ವಿಶ್ವಸಂಸ್ಥೆ ತಜ್ಞರು ವರದಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ, ಮಹಿಳೆಯರನ್ನು ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ, ತೀವ್ರವಾದ ಥಳಿತದಿಂದಾಗಿ ಸಾವಿಗೆ ಕಾರಣವಾದುದು ಹಾಗೂ ಜೀವಂತವಾಗಿ ಇಲ್ಲವೇ ಹತ್ಯೆಗೈದು ಸುಟ್ಟುಹಾಕಲಾಗಿದೆ ಎಂದು ತಜ್ಞರು ವರದಿಯಲ್ಲಿ ಹೇಳಿದ್ದಾರೆ.
ಕುಕಿಗಳ ವಿರುದ್ಧದ ಹಿಂಸಾಚಾರವನ್ನು ಸಮರ್ಥಿಸಲು ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಹರಡಿದ್ದರಿಂದ ಹಿಂಸಾಚಾರವು ಭುಗಿಲೇಳಲು ಕಾರಣವಾಯಿತೆಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಪರಿಸ್ಥಿತಿಯು ಹದಗೆಡುತ್ತಿರುವ ಈ ಸಂದರ್ಭದಲ್ಲಿ ಮಣಿಪುರ ಹಿಂಸಾಚಾರವು ಇನ್ನೊಂದು ದುರಂತಮಯ ಮೈಲುಗಲ್ಲಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ವಿಶ್ವಸಂಸ್ಥೆಯಲ್ಲಿರುವ ಭಾರತದ ಖಾಯಂ ರಾಯಭಾರಿ ಕಚೇರಿಯು, ಮಣಿಪುರದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದಿದೆ. ಮಣಿಪುರದ ಪರಿಸ್ಥಿತಿ ಹಾಗೂ ಅದಕ್ಕೆ ಸ್ಪಂದಿಸಲು ಭಾರತ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳುವಳಿಕೆಯ ಸಂಪೂರ್ಣ ಕೊರತೆಯಿರುವುದನ್ನು ವಿಶ್ವಸಂಸ್ಥೆಯ ತಜ್ಞರ ವರದಿಯು ತೋರಿಸುತ್ತದೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಇದೇ ವಿಷಯದ ಬಗ್ಗೆ ಆಗಸ್ಟ್ 29ರಂದು ಬಿಡುಗಡೆಗೊಳಿಸಲಾದ ಜಂಟಿ ಹೇಳಿಕೆಗೆ ಉತ್ತರಿಸಲು ಭಾರತಕ್ಕೆ 60 ದಿನಗಳ ಕಾಲಾವಕಾಶವನ್ನು ನೀಡುವ ಬದಲು ವಿಶ್ವಸಂಸ್ಥೆಯ ತಜ್ಞರು ಇನ್ನೊಂದು ಹೊಸ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಭಾರತವು ಅಸಮಾಧಾನ ವ್ಯಕ್ತಪಡಿಸಿದೆ. ಮಣಿಪುರದಲ್ಲಿ ಮೇ 3ರಂದು ಮೈತೇಯಿಗಳು ಹಾಗೂ ಕುಕಿಗಳ ನಡುವೆ ಸಂಘರ್ಷ ಭುಗಿಲೆದ್ದ ಬಳಿಕ ಈವರೆಗೆ 195ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 60 ಸಾವಿರ ಮಂದಿ ಕೂಡಾ ತಮ್ಮ ಮನೆಗಳನ್ನು ತೊರೆದು ಪರಾರಿಯಾಗಿದ್ದಾರೆ.
ಕೇಂದ್ರೀಯ ಭದ್ರತಾಪಡೆಗಳ ಬೃಹತ್ ಉಪಸ್ಥಿತಿಯ ಹೊರತಾಗಿಯೂ ಮಣಿಪುರದಲ್ಲಿ ಹಲವಾರು ಹತ್ಯೆ ಹಾಗೂ ಅತ್ಯಾಚಾರದ ಪ್ರಕರಣಗಳು, ಗಲಭೆನಿರತ ಗುಂಪುಗಳ ಪೊಲೀಸ್ ಶಸ್ತ್ರಾಸ್ತ್ರಗಳು ಹಾಗೂ ಹಲವಾರು ಮನೆಗಳನ್ನು ಕೊಳ್ಳೆ ಹೊಡೆದಿವೆ. ಹಿಂಸಾಚಾರ ನಿಯಂತ್ರಿಸುವಲ್ಲಿ ಮಣಿಪುರದ ಬಿಜೆಪಿ ಸರಕಾರವು ವಿಫಲವಾಗಿರುವುದನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸುತ್ತಿವೆ.