ಎರಡೂ ಅವಧಿಯ ಯುಪಿಎ ಸರಕಾರಕ್ಕೆ ಮನ್‌ ಮೋಹನ್ ಸಿಂಗ್ ಒಬ್ಬರೇ ಪ್ರಧಾನಿಯಾಗಿದ್ದರು : ಖರ್ಗೆ

Update: 2024-05-21 16:16 GMT

ನರೇಂದ್ರ ಮೋದಿ | PC: PTI

ಚಂಡೀಗಢ: "ಐದು ವರ್ಷಗಳಲ್ಲಿ ಐವರು ಪ್ರಧಾನಿಗಳು" ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 2004ರಲ್ಲೂ ಹೀಗೇ ಹೇಳಲಾಗಿತ್ತು. ಆದರೆ, ಪ್ರಧಾನಿ ಮನ್‌ ಮೋಹನ್ ಸಿಂಗ್ ಅಡಿಯಲ್ಲಿಯೆ ಎರಡು ಪೂರ್ಣಾವಧಿಯ ಯುಪಿಎ ಸರಕಾರಗಳು ತಮ್ಮ ಆಡಳಿತಾವಧಿಯನ್ನು ಪೂರೈಸಿದ್ದವು ಎಂದು ಕುಟುಕಿದರು.

ಮೇ 16ರಂದು ಉತ್ತರ ಪ್ರದೇಶದ ಪ್ರತಾಪ್ ಗಢದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಇಂಡಿಯಾ ಮೈತ್ರಿಕೂಟವು ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ಮಾಡಲು ಬಯಸಿದ್ದು, ಜೂನ್ 4ರ ನಂತರ ವಿಘಟನೆಯಾಗಲಿದೆ ಎಂದು ಹೇಳಿದ್ದರು.

ಆದರೆ, ಮೋದಿಯ ಹೇಳಿಕೆಯನ್ನು ಅಲ್ಲಗಳೆದಿರುವ ಖರ್ಗೆ, "ಯುಪಿಎ 1 ಹಾಗೂ 2 ಸರಕಾರಗಳಿಗೆ ಇತರೆ ಪಕ್ಷಗಳು ಬೆಂಬಲಿಸಿದ್ದವು ಹಾಗೂ ಆ ಎರಡೂ ಸರಕಾರಗಳು ತಮ್ಮ ಪೂರ್ಣಾವಧಿಯನ್ನು ಪೂರೈಸಿದ್ದವು" ಎಂದು ನೆನಪಿಸಿದ್ದಾರೆ.

ಹರ್ಯಾಣದ ಜಾಗಾಧ್ರಿಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾರೊಂದಿಗೆ ಭಾಗವಹಿಸಿದ ನಂತರ ಮಂಗಳವಾರ ಖರ್ಗೆ ಚಂಡೀಗಢಕ್ಕೆ ಆಗಮಿಸಿದ್ದರು.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಪಂಜಾಬ್ ನೆಲದಿಂದ ಬಂದಿದ್ದ ಓರ್ವ ವ್ಯಕ್ತಿ 10 ವರ್ಷ ಪ್ರಧಾನಿಯಾಗಿ ಈ ದೇಶವನ್ನು ಮುನ್ನಡೆಸಿ, ಅದರ ಆರ್ಥಿಕತೆಯನ್ನು ಬದಲಾಯಿಸಿದರು ಎಂದು ಮಾಜಿ ಪ್ರಧಾನಿ ಮನ್‌ ಮೋಹನ್ ಸಿಂಗ್ ಅವರನ್ನು ಉಲ್ಲೇಖಿಸಿ ಹೇಳಿದರು.

"ಆದರೆ, ಅವರು ಕಳೆದ 10 ವರ್ಷಗಳಲ್ಲಿ ಏನನ್ನೂ ಮಾಡಲಿಲ್ಲ" ಎಂದೂ ಬಿಜೆಪಿಯ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟದ ಬಳಿ ಪ್ರಧಾನಿ ಮುಖವಿಲ್ಲ ಎಂದು ಬಿಜೆಪಿ ಹೇಳುತ್ತಲೇ ಇದೆ. ಇದೇ ಮಾತನ್ನು ಅವರು 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಹೇಳಿದ್ದರು ಎಂದು ಖರ್ಗೆ ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News