ಮಥುರಾದ ಖೋವಾದಲ್ಲೂ ಕಲಬೆರಕೆ : ಸಂಸದೆ ಡಿಂಪಲ್ ಯಾದವ್ ಆರೋಪ

Update: 2024-09-23 15:15 GMT

ಡಿಂಪಲ್ ಯಾದವ್ | PTI

ಮೈನ್ ಪುರಿ (ಉತ್ತರ ಪ್ರದೇಶ) : ತಿರುಪತಿ ಲಡ್ಡು ಕಲಬೆರಕೆಯಾಗಿದೆ ಎಂಬ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಿಗೇ, ಮಥುರಾದ ಖೋವಾ ಕಲಬೆರಕೆಯಾಗಿದೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್, ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ರವಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಂಪಲ್ ಯಾದವ್, ತಿರುಪತಿ ಲಡ್ಡು ಪ್ರಸಾದ ಕಲಬೆರಕೆಯಾಗಿರುವುದು ಗಂಭೀರ ವಿಷಯವಾಗಿದ್ದು, ಇದು ಜನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಹೇಳಿದ್ದಾರೆ.

“ಆಹಾರ ಇಲಾಖೆಯ ವೈಫಲ್ಯದಿಂದ, ಕಲಬೆರಕೆ ಆಹಾರ ಮತ್ತು ಖಾದ್ಯ ತೈಲಗಳು ಜನರಲ್ಲಿ ಗಂಭೀರ ಅಸ್ವಸ್ಥತೆಯನ್ನುಂಟು ಮಾಡುತ್ತಿವೆ. ಈ ಕುರಿತು ಆಹಾರ ಇಲಾಖೆಯು ನಿರ್ಲಕ್ಷ್ಯ ಮತ್ತು ಮೌನ ವಹಿಸಿದೆ” ಎಂದು ಅವರು ದೂರಿದ್ದಾರೆ.

“ಮಥುರಾದಲ್ಲಿ ಮಾರಾಟ ಮಾಡಲಾಗುತ್ತಿರುವ ಖೋವಾ ಕಲಬೆರಕೆಯಾಗಿದೆ ಎಂಬ ವರದಿಗಳಿವೆ. ಈ ಎರಡೂ ಪ್ರಕರಣಗಳಲ್ಲೂ ಬಿಜೆಪಿ ಸರಕಾರವು ತನಿಖೆಯನ್ನು ನಡೆಸಬೇಕು” ಎಂದು ಯಾವುದೇ ವರದಿಯನ್ನು ಉಲ್ಲೇಖಿಸದೆ ಅವರು ಆಗ್ರಹಿಸಿದ್ದಾರೆ.

ಈ ನಡುವೆ, ಉತ್ತರ ಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಮಥುರಾದಲ್ಲಿನ ಪ್ರಮುಖ ದೇವಾಲಯಗಳಿಂದ ಪರೀಕ್ಷೆಗಾಗಿ 13 ಮಾದರಿಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News