294 ಮೊಬೈಲ್ ಫೋನ್ ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು | ನೇಪಾಳಕ್ಕೆ ಕಳ್ಳಸಾಗಣೆ ಶಂಕೆ

Update: 2024-09-23 16:41 GMT

ಸಾಂದರ್ಭಿಕ ಚಿತ್ರ

ಇಂದೋರ್ : ಸೋಮವಾರ ಇಂದೋರ್ ನಿಂದ 32 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು, ಆತನಿಂದ 294 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊಬೈಲ್ ಫೋನ್ ಗಳನ್ನು ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲದ ಭಾಗವಾಗಿ ನೇಪಾಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ಮಾನ್ಯತೆ ಹೊಂದಿರುವ ಬಿಲ್ ಗಳಿಲ್ಲದೆ ಸಾಗಣೆಯಾಗುತ್ತಿದ್ದ ಈ ಮೊಬೈಲ್ ಫೋನ್ ಗಳ ಒಟ್ಟಾರೆ ಮೌಲ್ಯ 35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸುಳಿವನ್ನು ಆಧರಿಸಿ ಪೊಲೀಸರು ಸಂದೀಪ್ ಕಶ್ಯಪ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಾಂದೋಟಿಯ ತಿಳಿಸಿದ್ದಾರೆ.

ಕಶ್ಯಪ್ ನನ್ನು ಈ ಕೆಲಸಕ್ಕೆ ನೇಮಿಸಿಕೊಂಡಿದ್ದ ವಾಸ್ವಾನಿ ಅಲಿಯಾಸ್ ಜಾನಿ ಎಂಬ ಮತ್ತೊಬ್ಬ ಕಳ್ಳ ಸಾಗಣೆ ಆರೋಪಿ, ಆತನಿಗೆ ಬೃಹತ್ ಕಮಿಷನ್ ನೀಡುವ ಆಮಿಷವೊಡ್ಡಿದ್ದ ಎಂದು ಹೇಳಲಾಗಿದೆ.

ಮೇಲ್ನೋಟದ ಸಾಕ್ಷ್ಯಾಧಾರಗಳ ಪ್ರಕಾರ, ಕಶ್ಯಪ್ ಬಿಲ್ ರಹಿತವಾಗಿ 60 ಮೊಬೈಲ್ ಫೋನ್ ಗಳನ್ನು ನೇಪಾಳಕ್ಕೆ ಕಳ್ಳಸಾಗಣೆ ಮಾಡಿರುವುದು ಕಂಡು ಬಂದಿದ್ದು, ಅವುಗಳನ್ನು ಈ ಹಿಂದೆ ವಾಸ್ವಾನಿಯ ಸೂಚನೆಯ ಮೇರೆಗೆ ಮಾರಾಟ ಮಾಡಿದ್ದಾನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಮೊಬೈಲ್ ಫೋನ್ ಗಳನ್ನು ದೇಶದ ವಿವಿಧ ಭಾಗಗಳಿಂದ ಸುಲಿಗೆ ಅಥವಾ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

“294 ಮೊಬೈಲ್ ಫೋನ್ ಗಳಿಗೆ ಬಿಲ್ ಅನ್ನು ಒದಗಿಸಲು ಕಶ್ಯಪ್ ವಿಫಲಗೊಂಡಿದ್ದರಿಂದ, ಆತನಿಂದ 35 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತದಲ್ಲಿ ಕಳವು ಮಾಡಿದ ಅಥವಾ ಸುಲಿಗೆ ಮಾಡಿದ ಮೊಬೈಲ್ ಫೋನ್ ಗಳನ್ನು ದೊಡ್ಡ ಸಂಖ್ಯೆಯಲ್ಲಿ ನೇಪಾಳಕ್ಕೆ ರವಾನಿಸಿ, ಮಾರಾಟ ಮಾಡುವ ಅಂತಾರಾಷ್ಟ್ರೀಯ ಜಾಲದೊಂದಿಗೆ ಕಶ್ಯಪ್ ಹಾಗೂ ವಾಸ್ವಾನಿಗೆ ಸಂಪರ್ಕವಿದೆ ಎಂದು ಶಂಕಿಸಲಾಗಿದೆ. ಈ ಕುರಿತು ವಿಸ್ತೃತ ತನಿಖೆ ನಡೆಯುತ್ತಿದೆ” ಎಂದು ದಾಂದೋಟಿಯ ಹೇಳಿದ್ದಾರೆ. ಅಲ್ಲದೆ ವಾಸ್ವಾನಿ ತಲೆಮರೆಸಿಕೊಂಡಿದ್ದಾನೆ ಎಂದೂ ಅವರು ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ವಾಸ್ವಾನಿಗೆ ಜಾಮೀನು ಮಂಜೂರು ಮಾಡುವುದಕ್ಕೂ ಮುನ್ನ, ಆತನನ್ನು ನೂರಾರು ಕದ್ದ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News