ಬಿಜೆಪಿ, ಆರೆಸ್ಸೆಸ್‌ ದೇಶಾದ್ಯಂತ ದ್ವೇಷ ಹರಡುತ್ತಿವೆ : ರಾಹುಲ್ ಗಾಂಧಿ ಆರೋಪ

Update: 2024-09-23 16:04 GMT

ರಾಹುಲ್ ಗಾಂಧಿ | PC : PTI

ಪೂಂಚ್ : ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್‌) ದೇಶಾದ್ಯಂತ ದ್ವೇಷ ಮತ್ತು ಹಿಂಸೆಯನ್ನು ಹರಡುತ್ತಿವೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.

‘‘ಅವರು ಎಲ್ಲೇ ಹೋದರೂ, ಜಾತಿಗಳು, ಧರ್ಮಗಳು, ರಾಜ್ಯಗಳು ಮತ್ತು ಭಾಷೆಗಳ ನಡುವೆ ವಿಭಜನೆಯನ್ನು ಸೃಷ್ಟಿಸಿ ಗಲಭೆಯನ್ನು ಪ್ರಚೋದಿಸುತ್ತಾರೆ’’ ಎಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಪಹಾರಿ ಮತ್ತು ಗುಜ್ಜರ್ ಸಮುದಾಯಗಳ ನಡುವೆ ಘರ್ಷಣೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದ ಅವರು, ಆದರೆ ಅದರ ಈ ಯೋಜನೆಯು ವಿಫಲಗೊಳ್ಳಲಿದೆ ಎಂದರು.

‘‘ದ್ವೇಷವನ್ನು ಪ್ರೀತಿಯಿಂದ ಮಾತ್ರ ಗೆಲ್ಲಬಹುದು. ಒಂದು ಕಡೆಯಲ್ಲಿ ದ್ವೇಷವನ್ನು ಹರಡುವವರು ಇದ್ದಾರೆ ಮತ್ತು ಇನ್ನೊಂದು ಬದಿಯಲ್ಲಿ ಪ್ರೀತಿಯನ್ನು ಹಂಚುವವರು ಇದ್ದಾರೆ’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.

‘‘ಕಾಂಗ್ರೆಸ್ ಎಲ್ಲರನ್ನೂ ಜೊತೆಗಿಟ್ಟುಕೊಂಡು ಮುಂದುವರಿಯುತ್ತದೆ ಮತ್ತು ಎಲ್ಲರಿಗೂ ಅವರ ಹಕ್ಕುಗಳನ್ನು ನೀಡುತ್ತದೆ’’ ಎಂದು ರಾಹುಲ್ ಹೇಳಿದರು. ಕಾಂಗ್ರೆಸ್‌ಗೆ ಎಲ್ಲರೂ ಸಮಾನರು ಮತ್ತು ಅದು ಯಾರನ್ನೂ ಹಿಂದೆ ಉಳಿಯಲು ಬಿಡುವುದಿಲ್ಲ ಎಂದರು.

‘‘ಜನರು ಏನೇ ಬಯಸಿದರೂ, ನಾನು ಯಾವ ಕೆಲಸ ಮಾಡಬೇಕೆಂದು ಅವರು ಹೇಳಿದರೂ, ಸಂಸತ್‌ನಲ್ಲಿ ಯಾವುದೇ ವಿಷಯದ ಬಗ್ಗೆ ಮಾತನಾಡಲು ನಾನು ಸಿದ್ಧನಿದ್ದೇನೆ. ಈ ವಿಷಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಜನತೆ ನನಗೆ ಸೂಚನೆ ನೀಡಿದರೆ ಸಾಕು’’ ಎಂದು ರಾಹುಲ್ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News