ಮಥುರಾ : 7 ಪಟಾಕಿ ಅಂಗಡಿಗಳಿಗೆ ಬೆಂಕಿ, 9 ಮಂದಿಗೆ ಗಾಯ

Update: 2023-11-12 17:03 GMT

Photo : PTI 

ಲಕ್ನೊ: ಉತ್ತರಪ್ರದೇಶದ ಮಥುರಾ ನಗರದ ಹೊರವಲಯದ ಗೋಪಾಲ್ಬಾಗ್ ನಲ್ಲಿ 7 ಪಟಾಕಿ ಅಂಗಡಿಗಳಿಗೆ ಹಾಗೂ 10 ಮೋಟಾರು ಸೈಕಲ್ ಗಳಿಗೆ ರವಿವಾರ ಬೆಂಕಿ ಹತ್ತಿಕೊಂಡು ಸಂಭವಿಸಿದ ದುರಂತದಲ್ಲಿ ಅಗ್ನಿ ಶಾಮಕ ದಳದ ಓರ್ವ ಸಿಬ್ಬಂದಿ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ದೀಪಾವಳಿಗಾಗಿ ರಾಯಾದಲ್ಲಿ ಆರಂಭಿಸಲಾಗಿದ್ದ ತಾತ್ಕಾಲಿಕ ಪಟಾಕಿ ಮಾರುಕಟ್ಟೆಯಲ್ಲಿ ರವಿವಾರ ಅಪರಾಹ್ನ ಈ ಅಗ್ನಿ ದುರಂತ ಸಂಭವಿಸಿದೆ. ಘಟನೆ ಸಂಭವಿಸುವ ಸಂದರ್ಭ ನೂರಾರು ಜನರು ಮಾರುಕಟ್ಟೆಯಲ್ಲಿ ಇದ್ದರು ಎಂದು ಮಹಾವನ್ ಸರ್ಕಲ್ ಅಧಿಕಾರಿ ಅಲೋಕ್ ಸಿಂಗ್ ತಿಳಿಸಿದ್ದಾರೆ.

“ಗೋಪಾಲ್ಬಾಗ್ ಪ್ರದೇಶದಲ್ಲಿ ಸಂಭವಿಸಿದ ಈ ಅಗ್ನಿ ದುರಂತದಲ್ಲಿ ಪಟಾಕಿ ಮಾರಾಟ ಮಾಡುವ 7 ಅಂಗಡಿಗಳು ನಾಶವಾಗಿ, 9 ಮಂದಿ ಗಾಯಗೊಂಡಿದ್ದಾರೆ. ಬೆಂಕಿ ಹತ್ತಿಕೊಳ್ಳಲು ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಕಾರಣ” ಎಂದು ರಾಯಾ ಪೊಲೀಸ್ ಠಾಣೆಯ ಎಸ್ಎಚ್ಒ ಅಜಯ್ ಕಿಶೋರ್ ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ 9 ಮಂದಿಯಲ್ಲಿ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ. ಇವರು ಆಗ್ರಾದಲ್ಲಿರುವ ಎಸ್ಎನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಳಿದವರು ಮಥುರಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ಬೆಂಕಿ ಇತರ 6 ಅಂಗಡಿಗಳಿಗೆ ಹರಡುವುದನ್ನು ತಡೆಯಲು ಹಾಗೂ ಜನರನ್ನು ರಕ್ಷಿಸಲು ಪ್ರಯತ್ನಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಚಂದ್ರಶೇಖರ್ ಕೂಡ ಗಾಯಗೊಂಡವರಲ್ಲಿ ಸೇರಿದ್ದಾರೆ “ ಎಂದು ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News