ಮೇಡಕ್ ಹಿಂಸಾಚಾರ: ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ 7 ಮಂದಿಯ ಬಂಧನ

Update: 2024-06-16 11:59 GMT

ಸಾಂದರ್ಭಿಕ ಚಿತ್ರ

ಹೈದರಾಬಾದ್: ಮೇಡಕ್ ನಗರದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಮೇಡಕ್ ಬಿಜೆಪಿ ಜಿಲ್ಲಾಧ್ಯಕ್ಷ ಗಡ್ಡಂ ಶ್ರೀನಿವಾಸ್, ಮೇಡಕ್ ಪಟ್ಟಣದ ಬಿಜೆಪಿ ಅಧ್ಯಕ್ಷ ಎಂ.ನಾಯಮ್ ಪ್ರಸಾದ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಇನ್ನಿತರ ಏಳು ಮಂದಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿರಾಜ್ ಉಲ್ ಉಲೂಮ್ ಮದರಸದ ಆಡಳಿತ ಸಮಿತಿಯು ಬಕ್ರೀದ್‌ಗೆ ಬಲಿ ನೀಡಲು ಜಾನುವಾರೊಂದನ್ನು ಖರೀದಿಸಿತ್ತು. ಅವರು ಜಾನುವಾರನ್ನು ಮದರಸದ ಆವರಣದೊಳಗೆ ತಂದ ಬೆನ್ನಿಗೇ ಅಲ್ಲಿ ಜಮಾಯಿಸಿದ್ದ ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತರು ಪ್ರಾಣಿಬಲಿ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಿತ್ತು. ಪೋಲಿಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿದ್ದರು.

ಒಂದು ಗಂಟೆಯ ನಂತರ, ಮತ್ತೆ ಮದ್ರಸಾ ಬಳಿಗೆ ಬಂದ ಗುಂಪು ಮದ್ರಸಾ ಮೇಲೆ ದಾಳಿ ನಡೆಸಿದವು. ಘಟನೆಯಲ್ಲಿ ಮದ್ರಸಾ ಒಳಗಿದ್ದ ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗುಂಪನ್ನು ಚದುರಿಸಿದರು.

ಇದಾದ ನಂತರ, ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಗುಂಪು, ಆಸ್ಪತ್ರೆಯ ಮೇಲೆ ಕಲ್ಲು ತೂರಾಟ ನಡೆಸಿತು. ಮಧ್ಯಪ್ರವೇಶಿಸಿದ ಪೊಲೀಸರು, ಲಾಠಿ ಚಾರ್ಜ್ ನಡೆಸಿ, ಗುಂಪನ್ನು ಮತ್ತೆ ಚದುರಿಸಿದರು.

ಈ ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳೀಯವಾಗಿ ಪ್ರಕ್ಷುಬ್ಧತೆ ಆವರಿಸಿತು. ಸಮಸ್ಯೆ ಉಲ್ಬಣಿಸುವುದನ್ನು ತಡೆಗಟ್ಟಲು ಪೊಲೀಸರು ಮೇಡಕ್ ಪಟ್ಟಣದಲ್ಲಿ ಗಸ್ತನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯ ಬೆನ್ನಿಗೇ ಮೇಡಕ್ ಪೊಲೀಸರು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪಟ್ಟಣದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

ಈ ನಡುವೆ, ಮುನ್ನೆಚ್ಚರಿಕೆಯ ಕ್ರಮವಾಗಿ ರವಿವಾರ ಶಂಶಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕ ಎ.ರಾಜಾ ಸಿಂಗ್ ಅವರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ಕೋಮು ಹಿಂಸಾಚಾರ ನಡೆದಿರುವ ಮೇಡಕ್ ಪಟ್ಟಣಕ್ಕೆ ಭೇಟಿ ನೀಡುವ ಯೋಜನೆ ಹೊಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News