ವಿಚಾರಣೆ ಬಾಕಿಯಿರುವಾಗ ಆರೋಪಿಯನ್ನು ಅಪರಾಧಿ ಅಥವಾ ನಿರಪರಾಧಿ ಎಂದು ಮಾಧ್ಯಮಗಳು ಘೋಷಿಸುವಂತಿಲ್ಲ: ಕೇರಳ ಹೈಕೋರ್ಟ್
ಕೊಚ್ಚಿ: ವಿಚಾರಣೆ ಬಾಕಿಯಿರುವಾಗ ಆರೋಪಿಗಳನ್ನು ಅಪರಾಧಿ ಅಥವಾ ನಿರಪರಾಧಿ ಎಂದು ಘೋಷಿಸುವ ಮಾಧ್ಯಮಗಳ ಹೇಳಿಕೆಗಳು ಸಂವಿಧಾನದಲ್ಲಿ ಸಂರಕ್ಷಿತ ವಾಕ್ ಸ್ವಾತಂತ್ರ್ಯದ ಅಡಿ ಬರುವುದಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ.
ತಮ್ಮ ಘನತೆಯ ಹಕ್ಕನ್ನು ಮಾಧ್ಯಮಗಳು ಉಲ್ಲಂಘಿಸಿವೆ ಎಂದು ಆರೋಪಿಗಳು ಭಾವಿಸಿದರೆ ಅವರು ಸಾಂವಿಧಾನಿಕ ನ್ಯಾಯಾಲಯದ ಮುಂದೆ ಪರಿಹಾರವನ್ನು ಕೋರಬಹುದು ಎಂದು ಐವರು ನ್ಯಾಯಾಧೀಶರ ಪೀಠವು ಗುರುವಾರ ವಿಚಾರಣೆ ಸಂದರ್ಭದಲ್ಲಿ ತಿಳಿಸಿತು.
ಮೇ 24,2018ರಂದು ಉಚ್ಚ ನ್ಯಾಯಾಲಯದ ಪೂರ್ಣ ಪೀಠವು ಕಾನೂನು ಪ್ರಶ್ನೆಗಳ ಗುಚ್ಛವೊಂದನ್ನು ಐವರು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಿತ್ತು. ಸಾಂವಿಧಾನಿಕ ತತ್ತ್ವಗಳ ಪ್ರಕಾರ ಮಾಧ್ಯಮಗಳನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ನಿಯಮಗಳು ಸಾಕೇ ಹಾಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ನಾಗರಿಕರಿಗೆ ಇರುವ ರೀತಿಯಲ್ಲಿಯೇ ಮಾಧ್ಯಮಗಳಿಗೂ ಲಭ್ಯವಿದೆಯೇ ಎನ್ನುವುದನ್ನು ಈ ಪ್ರಶ್ನೆಗಳು ಒಳಗೊಂಡಿದ್ದವು.
ಸಮರ್ಥ ಶಾಸಕಾಂಗ ಸಂಸ್ಥೆ ರೂಪಿಸಿದ ಕಾನೂನು ಹೊರತುಪಡಿಸಿ ಮಾಧ್ಯಮಗಳ ವಾಕ್ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿಯೂ ಸಂವಿಧಾನದ ವಿಧಿ 19(2)ರಲ್ಲಿ ಉಲ್ಲೇಖಿಸಿರುವ ಕಾರಣಗಳಿಂದಾಗಿ ಮಾತ್ರ ಈ ಹಕ್ಕನ್ನು ನಿರ್ಬಂಧಿಸಬಹುದು ಎಂದು ಐವರು ನ್ಯಾಯಾಧೀಶರ ಪೀಠವು ಗುರುವಾರ ಎತ್ತಿ ಹಿಡಿದಿದೆ.
ವಿಧಿ 19(2)ರ ಪ್ರಕಾರ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆ, ವಿದೇಶಗಳೊಂದಿಗೆ ಸೌಹಾರ್ದ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿ ಕಾರಣಗಳಿಂದ ಸರಕಾರವು ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು.
ಆದಾಗ್ಯೂ ನ್ಯಾಯಾಲಯವು,ಪ್ರಕರಣವು ವಿಚಾರಣಾಧೀನವಾಗಿರುವಾಗ ಆರೋಪಿಯನ್ನು ಅಪರಾಧಿ ಅಥವಾ ನಿರಪರಾಧಿ ಎಂದು ಘೋಷಿಸಿ ಮಾಧ್ಯಮಗಳ ಹೇಳಿಕೆಗಳು ಸಂವಿಧಾನದ ವಿಧಿ 19(1)(ಎ) ಅಡಿ ಖಾತರಿ ಪಡಿಸಲಾಗಿರುವ ರಕ್ಷಣೆಯನ್ನು ಪಡೆಯುವುದಿಲ್ಲ. ಆರೋಪಿ ಅಪರಾಧಿ ಅಥವಾ ನಿರಪರಾಧಿ ಎಂಬ ಅಂತಿಮ ಮತ್ತು ಅಧಿಕೃತ ತೀರ್ಮಾನವನ್ನು ನ್ಯಾಯಾಂಗ ಪ್ರಾಧಿಕಾರವು ಮಾತ್ರ ಹೊರಡಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಶಂಕಿತರ ವಿರುದ್ಧ ಆರೋಪಗಳನ್ನು ಹೊರಿಸುವ ಮುನ್ನವೇ ಮಾಧ್ಯಮಗಳಿಂದ ವಿಚಾರಣೆಯು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತದೆ ಎಂದು ಹೇಳಿರುವ ನ್ಯಾ.ಎ.ಕೆ.ಜಯಶಂಕರನ್ ನಂಬಿಯಾರ್ ನೇತೃತ್ವದ ಪೀಠವು, ‘ಇತ್ತೀಚಿನ ದಿನಗಳಲ್ಲಿ ಟಿವಿ ವಾಹಿನಿಗಳು ಹಾಲಿ ನಡೆಯುತ್ತಿರುವ ತನಿಖೆಗಳು ಮತ್ತು ಬಾಕಿಯಿರುವ ಸಾರ್ವಜನಿಕ ಹಿತಾಸಕ್ತಿ ಕ್ರಿಮಿನಲ್ ವಿಚಾರಣೆಗಳ ಕುರಿತು ಪ್ರೈಮ್ ಟೈಮ್ನಲ್ಲಿ ತೀವ್ರ ಚರ್ಚೆಗಳನ್ನು ಆರಂಭಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆರೋಪಿಯು ಅಪರಾಧಿ ಎಂದು ಸಾಬೀತಾಗುವವರೆಗೆ ನಿರಪರಾಧಿ ಎಂಬ ಕಾನೂನಿನ ಪರಿಗಣನೆಯನ್ನು ಕಡೆಗಣಿಸುವುದು ಮಾಧ್ಯಮಗಳಿಗೆ ಅಭ್ಯಾಸವಾಗಿಬಿಟ್ಟಿದೆ’ ಎಂದು ಹೇಳಿದೆ.