ಜಮ್ಮುಕಾಶ್ಮೀರ |ಬಿಜೆಪಿ ಜೊತೆ ಮೈತ್ರಿ ಸಾಧ್ಯತೆ ತಳ್ಳಿಹಾಕಿದ ಮೆಹಬೂಬಾ

Update: 2024-09-03 15:08 GMT

 ಮೆಹಬೂಬಾ ಮುಫ್ತಿ | PTI

ಶ್ರೀನಗರ : ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಜೊತೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವ ಸಾಧ್ಯತೆಯನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಮಂಗಳವಾರ ತಳ್ಳಿಹಾಕಿದ್ದಾರೆ. ಆದರೆ ವಿಧಾನಸಭಾ ಚುನಾವಣೆ ಬಳಿಕ ಸರಕಾರ ರಚನೆಯಲ್ಲಿ ತನ್ನ ಪಕ್ಷದ ಸೇರ್ಪಡೆಯಿಲ್ಲದೆ ಯಾವುದೇ ಸರಕಾರ ರಚನೆಯಾಗುವುದು ಅಸಾಧ್ಯವೆಂದು ಅವರು ಪ್ರತಿಪಾದಿಸಿದ್ದಾರೆ.

ಶ್ರೀನಗರದಲ್ಲಿರುವ ಪಿಡಿಪಿ ಮುಖ್ಯ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಎದುರಾಳಿ ಪಕ್ಷವಾದ ನ್ಯಾಶನಲ್ ಕಾನ್ಫರೆನ್ಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಮ್ಮುಕಾಶ್ಮೀರದಲ್ಲಿ ಹೇಗಾದರೂ ಮಾಡಿ ಅಧಿಕಾರವನ್ನು ಹಿಡಿಯುವ ಏಕೈಕ ಉದ್ದೇಶದಿಂದ ನ್ಯಾಶನಲ್ ಕಾನ್ಫರೆನ್ಸ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆಯೆಂದವರು ಆಪಾದಿಸಿದರು.

‘‘ನ್ಯಾಶನಲ್ ಕಾನ್ಫರೆನ್ಸ್ ಗೆ ಅಧಿಕಾರ ಹಿಡಿಯುವುದಲ್ಲದೇ ಬೇರೇನೂ ಗುರಿಯಿಲ್ಲ. 1947ರಿಂದಲೂ ಅದು ಹೀಗೆಯೇ ಮಾಡುತ್ತಾ ಬಂದಿದೆ. ಸರಕಾರ ರಚಿಸುವ ಸಚಿವ ಸ್ಥಾನಗಳನ್ನು ಗಿಟ್ಟಿಸುವ ಏಕೈಕ ಉದ್ದೇಶದಿಂದ ಅದು ಚುನಾವಣಾ ಮೈತ್ರಿಗಳನ್ನು ಏರ್ಪಡಿಸಿಕೊಳ್ಳುತ್ತಾ ಬಂದಿದೆ. ಆದರೆ ಪಿಡಿಪಿ ಪಕ್ಷವು ಕಾರ್ಯಸೂಚಿಯ ಆಧಾರದಲ್ಲಿ ಚುನಾವಣೆಗಳನ್ನು ಎದುರಿಸಲು ಬಯಸುತ್ತದೆ ಎಂದು ಮೆಹಬೂಬಾ ಹೇಳಿದರು. ವಿಧಾನಸಭಾ ಚುನಾವಣೆಯ ಬಳಿಕ ತನ್ನ ಪಕ್ಷದ ಬೆಂಬಲವಿಲ್ಲದೆ ಯಾವುದೇ ಸರಕಾರ ರಚನೆಯಾಗುವುದು ಅಸಾಧ್ಯವೆಂದು ಅವರು ಹೇಳಿದರು.

2002ರಲ್ಲಿ ಕೇವಲ 16 ಶಾಸಕರ ಬೆಂಬಲದೊಂದಿಗೆ ನಾವು ಸರಕಾರವನ್ನು ರಚಿಸಿದ್ದೆವು. ದೇವರು ಇಚ್ಛಿಸಿದಲ್ಲಿ, ಈ ಸಲವೂ ಪಿಡಿಪಿಯ ಸೇರ್ಪಡೆಯಿಲ್ಲದೆ ಯಾವುದೇ ಸರಕಾರ ರಚನೆಯಾಗದು ಎಂದು ಆಕೆ ಹೇಳಿದರು.

ಪಿಡಿಪಿಗೆ ಸರಕಾರ ರಚನೆಗಿಂತ ತನ್ನ ಕಾರ್ಯಸೂಚಿಯ ಜಾರಿಯೇ ಮುಖ್ಯವಾದುದು ಎಂದು ಪಿಡಿಪಿ ಅಧ್ಯಕ್ಷೆ ಸ್ಪಷ್ಟಪಡಿಸಿದರು. ಆದರೆ ಈ ಸಲದ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಯ ಜೊತೆ ಮೈತ್ರಿಮಾಡಿಕೊಳ್ಳುವ ಯಾವುದೇ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು.

ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಹಿಡಿಯುವ ಉದ್ದೇಶದಿಂದ ತನ್ನ ಪಕ್ಷವು ಬಿಜೆಪಿ ಜೊತೆ ಕೈ ಜೋಡಿಸಿತ್ತು. ಆದರೆ, ಈಗ ಈ ನಿಟ್ಟಿನಲ್ಲಿ ಬಿಜೆಪಿಯು ಯಾವುದೇ ಪ್ರಯತ್ನಗಳನ್ನು ನಡೆಸುತ್ತಿಲ್ಲವಾದ್ದರಿಂದ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಅವಕಾಶವೇ ಇರದು ಎಂದು ಮೆಹಬೂಬಾ ಹೇಳಿದರು.

ಮೆಹಬೂಬಾ ನೇತೃತ್ವದ ಪಿಡಿಪಿ ಪಕ್ಷವು 2015ರಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರಕಾರವನ್ನು ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News