ಪಿಣರಾಯಿ ವಿಜಯನ್ ಭಾಷಣ ವೇಳೆ ಮೈಕ್‌ಗೆ ಅಡಚಣೆ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು

Update: 2023-07-26 17:45 GMT

Photo: ANI

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಷಣ ಮಾಡುವಾಗ ಮೈಕ್‌ಗೆ ಅಡಚಣೆಯುಂಟಾಗಿದ್ದು, ಈ ಸಂಬಂಧ ಕೇರಳ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಮೈಕ್ ಮತ್ತು ಧ್ವನಿವರ್ಧಕ ವ್ಯವಸ್ಥೆ ಸೇವೆಯ ಮಾಲಕ ರಂಜಿತ್ ಪ್ರಕಾರ, ವೇದಿಕೆಯ ಬಳಿ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ನೆರೆದಿದ್ದುದರಿಂದ ಮುಖ್ಯಮಂತ್ರಿಯು ಶ್ರದ್ಧಾಂಜಲಿ ಭಾಷಣ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಮೈಕ್ ತಪ್ಪಾಗಿ ಕಾರ್ಯನಿರ್ವಹಿಸತೊಡಗಿತು ಎಂದು ತಿಳಿಸಿದ್ದಾರೆ ಎಂದು ಸ್ಥಳೀಯ ದಿನಪತ್ರಿಕೆ ವರದಿ ಮಾಡಿದೆ. ಆದರೆ, ಈ ಸಮಸ್ಯೆಯು 10 ಸೆಕೆಂಡ್‌ಗಳ ಒಳಗಾಗಿ ಪರಿಹಾರಗೊಂಡಿದೆ.

ವೇದಿಕೆಯ ಮೆಟ್ಟಿಲಿನ ಬಳಿ ಇರಿಸಿದ್ದ ಧ್ವನಿವರ್ಧಕದ ಮೇಲೆ ಛಾಯಾಗ್ರಾಹಕರೊಬ್ಬರ ಚೀಲವೊಂದು ಬಿದ್ದಿದ್ದರಿಂದ ಮೈಕ್‌ನ ಶಬ್ದ ಗರಿಷ್ಠ ಮಟ್ಟಕ್ಕೆ ಏರಿಕೆಯಾಯಿತು ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ಕೇವಲ ಮೈಕ್ ಹಾಗೂ ಆ್ಯಂಪ್ಲಿಫೈಯರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯು ಉದ್ದೇಶಪೂರ್ವಕವಾಗಿ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ತಜ್ಞರ ಪರೀಕ್ಷೆಯ ನಂತರ ಸಾಧನಗಳನ್ನು ಮರಳಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ರಂಜಿತ್ ಹೇಳಿದ್ದಾರೆ.

ಆದರೆ, ಘಟನೆಯ ನಂತರ ಯಾವುದೇ ರಾಜಕೀಯ ಪಕ್ಷವಾಗಲಿ ಅಥವಾ ಸಂಘಟಕರಾಗಲಿ ಈ ಕುರಿತು ದೂರು ದಾಖಲಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News