ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್ ನಿರ್ದೇಶನಗಳ ಉಲ್ಲಂಘನೆ ಮುಂದುವರಿಸಿರುವ ಪತಂಜಲಿ ಆಯುರ್ವೇದ; ವರದಿ
ಹೊಸದಿಲ್ಲಿ: ತನ್ನ ಆಯುಷ್ ಉತ್ಪನ್ನಗಳ ದಾರಿ ತಪ್ಪಿಸುವ ಜಾಹೀರಾತುಗಳಿಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ತೀವ್ರ ತರಾಟೆಗೊಳಗಾಗಿದ್ದರೂ ಯೋಗಗುರು ರಾಮದೇವ್ ಅವರ ಪತಂಜಲಿ ಆಯುರ್ವೇದವು ಕೆಲವು ಕಾಯಿಲೆಗಳು ಮತ್ತು ರೋಗಗಳಿಗೆ ಚಿಕಿತ್ಸೆಗಾಗಿ ಕೆಲವು ಔಷಧಿಗಳ ಜಾಹೀರಾತನ್ನು ನಿಷೇಧಿಸಿರುವ ಕಾಯ್ದೆಯ ಉಲ್ಲಂಘನೆಯನ್ನು ಮುಂದುವರಿಸಿದೆ ಎಂದು newindianexpress.com ವರದಿ ಮಾಡಿದೆ.
ಜುಲೈ 9ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನ್ನ ಅಫಿಡವಿಟ್‌ನಲ್ಲಿ ಪತಂಜಲಿ ಆಯುರ್ವೇದ, ಉತ್ತರಾಖಂಡ ರಾಜ್ಯಪರವಾನಿಗೆ ಪ್ರಾಧಿಕಾರವು ಅಮಾನತುಗೊಳಿಸಿರುವ 14 ಆಯುರ್ವೇದ ಔಷಧಿಗಳ ಎಲ್ಲ ಜಾಹೀರಾತುಗಳನ್ನು ತೆಗೆದುಹಾಕಲಾಗುವುದು ಮತ್ತು ಹಿಂದೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿತ್ತು.
ಆದರೆ ಪತಂಜಲಿ ಆಯುರ್ವೇದ 2023,ನವಂಬರ್ ಮತ್ತು 2024,ಜು.9ರಂದು ವ್ಯಕ್ತಪಡಿಸಿದ್ದ ಬದ್ಧತೆಗಳನ್ನು ಉಲ್ಲಂಘಿಸಿ ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ಎಕ್ಸ್‌ನಲ್ಲಿ ಪತಂಜಲಿ ದೃಷ್ಟಿ ಆಯ್ ಡ್ರಾಪ್‌ನ ಜಾಹೀರಾತುಗಳನ್ನು ಮುಂದುವರಿಸಿದೆ ಎಂದು ಕೇರಳದ ಆರ್‌ಟಿಐ ಕಾರ್ಯಕರ್ತ ಕೆ.ವಿ.ಬಾಬು ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಬಗ್ಗೆ ತಾನು ಜು.12ರಂದು ಸಲ್ಲಿಸಿದ್ದ ದೂರಿನ ಮೇರೆಗೆ ಉತ್ತರಾಖಂಡ ರಾಜ್ಯ ಪರವಾನಿಗೆ ಪ್ರಾಧಿಕಾರವು ಕ್ರಮವನ್ನು ಕೈಗೊಳ್ಳುವಂತೆ ಹರಿದ್ವಾರದ ಡ್ರಗ್ ಇನ್ಸ್‌ಪೆಕ್ಟರ್‌ಗೆ ಜು.15ರಂದು ನಿರ್ದೇಶನ ನೀಡಿತ್ತು. ಟ್ವಿಟರ್‌ನಲ್ಲಿ ಕೆಲವು ಹಿಂದಿನ ಜಾಹೀರಾತುಗಳನ್ನು ತೆಗೆಯಲಾಗಿದ್ದು,ಇನ್ನೂ ಕೆಲವು ಈಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ಉಳಿದುಕೊಂಡಿವೆ. ಇದು ಪತಂಜಲಿ ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯ ನೇರ ಉಲ್ಲಂಘನೆಯಾಗಿದೆ. ಈ ಬಗ್ಗೆ ತಾನು ಜು.18ರಂದು ಮತ್ತೊಮ್ಮೆ ದೂರು ಸಲ್ಲಿಸಿದ್ದೇನೆ. ಆದರೂ ದೃಷ್ಟಿ ಆಯ್ ಡ್ರಾಪ್‌ನ ಜಾಹೀರಾತು ಎಕ್ಸ್‌ನಲ್ಲಿ ಮುಂದುವರಿದಿದೆ ಎಂದರು.
ಪತಂಜಲಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ದೃಷ್ಟಿ ಆಯ್ ಡ್ರಾಪ್ಸ್ ಗ್ಲುಕೋಮಾ,ಕಣ್ಣಿನ ಪೊರೆ,ಇರುಳು ಕುರುಡುತನ ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ಹೇಳಿಕೊಂಡಿದೆ.
ಕಣ್ಣುಗಳಿಗೆ ಸೂಕ್ತ ಆಯ್ ಡ್ರಾಪ್‌ಗಳನ್ನು ಬಳಸದಿದ್ದರೆ ಅಂಧತ್ವಕ್ಕೆ ಕಾರಣವಾಗಬಲ್ಲದು ಮತ್ತು ಅನೇಕ ವೈದ್ಯರು ಹಲವಾರು ಸಂದರ್ಭಗಳಲ್ಲಿ ಪತಂಜಲಿ ಆಯ್ ಡ್ರಾಪ್‌ಗಳ ಬಳಕೆಯ ವಿರುದ್ಧ ಎಚ್ಚರಿಕೆ ನೀಡಿದ್ದಾರೆ ಎಂದು ನೇತ್ರತಜ್ಞರಾಗಿರುವ ಬಾಬು ತಿಳಿಸಿದರು.