ಆರ್‌ಟಿಐ ಕಾಯ್ದೆಯನ್ನು ಕೊಲ್ಲುತ್ತಿರುವ ಮೋದಿ ಸರಕಾರ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ಸಂಚಿನ ಭಾಗವಾಗಿ ಮೋದಿ ಸರಕಾರವು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ‘ಚೂರುಚೂರಾಗಿ’ ಕೊಲ್ಲುತ್ತಾ ಬಂದಿದೆಯೆಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆಪಾದಿಸಿದ್ದಾರೆ.
ಆರ್‌ಟಿಐ ಜಾಲತಾಣದಿಂದ ಭಾರೀ ಸಂಖ್ಯೆಯ ಅರ್ಜಿಗಳು ನಾಪತ್ತೆಯಾಗಿವೆಯೆಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಇದೊಂದು ಮೇಲ್ನೋಟಕ್ಕೆ ಕಾಣುವ ಘಟನೆಯಷ್ಟೇ ಆಗಿದ್ದು, ಕಾಯ್ದೆಯನ್ನು ಆಂತರಿಕವಾಗಿ ನಾಶಪಡಿಸುವ ಸಂಚು ಇನ್ನಷ್ಟು ಆಳವಾಗಿದೆ ಎಂದವರು ಹೇಳಿದರು.
‘‘ಮೋದಿ ಸರಕಾರವು ಆರ್‌ಟಿಐ ಕಾಯ್ದೆಯನ್ನು ಚೂರುಚೂರಾಗಿ ಕೊಲ್ಲುತ್ತಾ ಬಂದಿದೆ. ಇದು ಕೇವಲ ಜನತೆಯ ಸಾಂವಿಧಾನಿಕ ಹಕ್ಕುಗಳ ಮೇಲೆ ನಡೆಸಿದ ದಾಳಿ ಮಾತ್ರವಲ್ಲ. ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಸಂಚಿನ ಇನ್ನೊಂದು ಹೆಜ್ಜೆಯಾಗಿದೆ’’ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ‘ಪೋಸ್ಟ್’ ಮಾಡಿದ್ದಾರೆ.
‘‘ದತ್ತಾಂಶ ಸಂರಕ್ಷಣಾ ಕಾಯ್ದೆಯ ಸೋಗಿನಲ್ಲಿ ಆರ್‌ಟಿಐ ಕಾಯ್ದೆಯನ್ನು ತಿದ್ದುಪಡಿಗೊಳಿಸುವ ಕುರಿತಾದ ಕೇಂದ್ರ ಸರಕಾರದ ಪ್ರಸ್ತಾವನೆಯು ನಿರಂಕುಶವಾದಿ ಸರಕಾರವು ಮಾಹಿತಿ ಹಕ್ಕು ಕಾಯ್ದೆಯ ಮೇಲೆ ನಡೆಸಿದ ಹೇಡಿತನದ ದಾಳಿಯಾಗಿದೆ’’ ಎಂದು ಅವರು ಆಪಾದಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಲಾದ ಡಿಜಿಟಲ್ ಖಾಸಗಿ ದತ್ತಾಂಶ ಸಂರಕ್ಷಣಾ ವಿಧೇಯಕವು, ಆರ್‌ಟಿಐ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಪ್ರತಿಪಕ್ಷಗಳು ಹಾಗೂ ನಾಗರಿಕ ಹಕ್ಕುಗಳ ಸಂಘಟನೆಗಳು ಆಪಾದಿಸಿವೆ.
ಆದರೆ ಕೇಂದ್ರ ಸರಕಾರವು ಅದನ್ನು ನಿರಾಕರಿಸಿವೆ.