ವಿವೇಕಾನಂದ ಸ್ಮಾರಕದಲ್ಲಿ ಧ್ಯಾನ ಆರಂಭಿಸಿದ ಮೋದಿ

Update: 2024-05-30 16:33 GMT

ನರೇಂದ್ರ ಮೋದಿ | PTI 

ಹೊಸದಿಲ್ಲಿ : ಮೂರು ತಿಂಗಳುಗಳ ಬಿಡುವಿರದ ಚುನಾವಣಾ ಪ್ರಚಾರದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸಂಜೆ ತಮಿಳುನಾಡಿನ ಕರಾವಳಿ ಪಟ್ಟಣವಾದ ಕನ್ಯಾಕುಮಾರಿಗೆ ಆಗಮಿಸಿದ್ದು, ಅಲ್ಲಿನ ಪ್ರಸಿದ್ಧ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ತಾಸುಗಳ ಧ್ಯಾನವನ್ನು ಆರಂಭಿಸಿದರು.

ತಿರುವನಂತಪುರದಿಂದ ಹೆಲಿಕಾಪ್ಟರ್ನಲ್ಲಿ ಕನ್ಯಾಕುಮಾರಿಗೆ ಆಗಮಿಸಿದ ಮೋದಿಯವರು ಭಗವತಿ ಅಮ್ಮನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆನಂತರ ಫೆರ‍್ರಿ ದೋಣಿಯ ಮೂಲಕ ವಿವೇಕಾನಂದ ಸ್ಮಾರಕವನ್ನು ತಲುಪಿ, ಧ್ಯಾನವನ್ನು ಆರಂಭಿಸಿದರು. ಜೂನ್ 1ರವರೆಗೆ ಅವರ ಧ್ಯಾನವು ಮುಂದುವರಿಯಲಿದೆ.

ಧೋತಿ ಹಾಗೂ ಬಿಳಿ ಶಾಲು ಧರಿಸಿದ ಮೋದಿ ಅವರು ಧ್ಯಾನವನ್ನು ಆರಂಭಿಸುವ ಮುನ್ನ ಧ್ಯಾನ ಮಂಟಪದ ಮೆಟ್ಟಲುಗಳಲ್ಲಿ ಕುಳಿತು ತುಸು ಸಮಯ ಕಳೆದರು.

ಜೂನ್ 1ರಂದು ಮೋದಿ ಅವರು ವಿವೇಕಾನಂದ ಸ್ಮಾರಕದಿಂದ ನಿರ್ಗಮಿಸುವ ಮುನ್ನ ಸಮೀಪದಲ್ಲೇ ಇರುವ ತಿರುವಳ್ಳುವರ್ ಪ್ರತಿಮೆ ಇರುವ ಸ್ಥಳಕ್ಕೂ ಭೇಟಿ ನೀಡಲಿದ್ದಾರೆ. ವಿವೇಕಾನಂದ ಸ್ಮಾರಕ ಹಾಗೂ 133 ಅಡಿ ಎತ್ತರದ ತಿರುವಳ್ಳುವರ್ ವಿಗ್ರಹವನ್ನು ಎರಡು ಪ್ರತ್ಯೇಕವಾದ ಪುಟ್ಟ ದ್ವೀಪಗಳಲ್ಲಿ ನಿರ್ಮಿಸಲಾಗಿದೆ.

ಕನ್ಯಾಕುಮಾರಿಯಲ್ಲಿ ಮೋದಿಯವರು ಚುನಾವಣಾ ಉದ್ದೇಶದಿಂದ ಧ್ಯಾನವನ್ನು ನಡೆಸುತ್ತಿದ್ದಾರೆಂದು ಆರೋಪಿಸಿ ತಂದೈ ಪೆರಿಯಾರ್ ದ್ರಾವಿಡ ಕಳಗಂನ ಕಾರ್ಯಕರ್ತರು ಮದುರೈನಲ್ಲಿ ಕಪ್ಪು ಬಾವುಟ ಪ್ರದರ್ಶನ ನಡೆಸಿದರು. ಜೂನ್ 1ರ ಲೋಕಸಭಾ ಚುನಾವಣೆಯ ಅಂತಿಮ ಹಾಗೂ ಏಳನೇ ಹಂತದ ಚುನಾವಣೆಯ ಸಂದರ್ಭ ಮೋದಿ ಅವರ ಧ್ಯಾನ ಕಾರ್ಯಕ್ರಮವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ನೆಟ್ಟಿಗರಿಂದ ಗೋ ಬ್ಯಾಕ್ ಮೋದಿ ಹ್ಯಾಶ್ಟ್ಯಾಗ್ ಪೋಸ್ಟ್ಗಳ ಮಹಾಪೂರವೇ ಹರಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News