ರಾಯ್‌ಪುರ ಎಐಐಎಂಎಸ್ ನಲ್ಲಿ ರಾತ್ರಿಯಿಡೀ ರ‍್ಯಾಗಿಂಗ್: ವಿದ್ಯಾರ್ಥಿಗಳ ಆರೋಪ

Update: 2024-11-29 04:27 GMT

x.com/NareshJ

ರಾಯಪುರ: ಇಲ್ಲಿನ ಎಐಐಎಂಎಸ್ ನಲ್ಲಿ ನವೆಂಬರ್ 16ರಂದು ರಾತ್ರಿಯಿಡೀ ರ‍್ಯಾಗಿಂಗ್ ನಡೆದಿದ್ದು, ಮುಂಜಾನೆ 3 ಗಂಟೆವರೆಗೂ ಬಲವಂತವಾಗಿ ನಿಲ್ಲಿಸಿದ ಕಾರಣದಿಂದ ಕೆಲ ವಿದ್ಯಾರ್ಥಿನಿಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಎಂಬಿಬಿಎಸ್ ವಿದ್ಯಾರ್ಥಿಗಳು ಆಪಾದಿಸಿದ್ದಾರೆ.

ಸುಪ್ರೀಂಕೋರ್ಟ್ ವಕೀಲೆ ಮತ್ತು ಶಿಕ್ಷಣದಲ್ಲಿ ಹಿಂಸೆ ವಿರುದ್ಧದ ಸೊಸೈಟಿ (ಸೇವ್) ಸಂಚಾಲಕಿಯೂ ಆಗಿರುವ ಮೀರಾ ಪಟೇಲ್ ಅವರಿಗೆ ಈ ಸಂಬಂಧ ಅನಾಮಧೇಯ ಪತ್ರ ಬರೆದಿರುವ ವಿದ್ಯಾಥಿಗಳ ಗುಂಪು, ಕಿರುಕುಳ ನೀಡುತ್ತಿರುವ ಕೆಲ ಹಿರಿಯ ವಿದ್ಯಾರ್ಥಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ. ಈ ದೂರನ್ನು ಸಂಸ್ಥೆಗೆ ವರ್ಗಾಯಿಸಿರುವ ಅವರು, ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಧ್ಯರಾತ್ರಿ ವೇಳೆಗೆ ಕೊಠಡಿಗೆ ಬಂದ ಹಿರಿಯ ವಿದ್ಯಾರ್ಥಿಗಳು, ನಡುಗುವ ಚಳಿಯಲ್ಲಿ ಕೇವಲ ಟಿ-ಷರ್ಟ್ ನಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ವರೆಗೂ ನಡೆದುಕೊಂಡು ಹೋಗುವಂತೆ ಬಲವಂತಪಡಿಸಿದರು ಎಂದು 2023ರ ಬ್ಯಾಚ್ ನ ಎಂಬಿಬಿಎಸ್ ವಿದ್ಯಾರ್ಥಿಗಳು ದೂರಿದ್ದಾರೆ. ಭದ್ರತಾ ಸಿಬ್ಬಂದಿಯ ಎದುರೇ ನಮ್ಮ ಫೋನ್ ಗಳನ್ನು ಕಸಿದುಕೊಂಡು ಮುಂಜಾನೆ 3 ಗಂಟೆಯವರೆಗೂ ರ‍್ಯಾಗಿಂಗ್ ಮುಂದುವರಿಸಿದ್ದಾರೆ ಎನ್ನುವುದು ಅವರ ಆರೋಪ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಯಪುರ ಎಐಐಎಂಎಸ್ ವಕ್ತಾರ ಮೃತ್ಯುಂಜಯ ರಾಥೋಡ್, ರ‍್ಯಾಗಿಂಗ್ ಬಗ್ಗೆ ಸಂಸ್ಥೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ. ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕ್ಯಾಂಪಸ್ ಇದೆ. ಈ ಅನಾಮಧೇಯ ದೂರಿನ ಬಗ್ಗೆ ರ್ಯಾಗಿಂಗ್ ತಡೆ ಸಮಿತಿ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ರಾಯಪುರ ಐಎಂಎ ಅಧ್ಯಕ್ಷ ಡಾ.ರಾಕೇಶ್ ಗುಪ್ತಾ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ತೀರಾ ಕಳವಳಕಾರಿ ಪ್ರಕರಣ ಹಾಗೂ ಕ್ಯಾಂಪಸ್ ನಲ್ಲಿ ಎರಡನೇ ಪ್ರಕರಣ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News