ಸುಪ್ರೀಂಕೋರ್ಟ್ ಗೆ ದೆಹಲಿ ಹೈಕೋರ್ಟ್ ಸಿಜೆ ಮನಮೋಹನ್ ಹೆಸರು ಶಿಫಾರಸ್ಸು
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂಕೋರ್ಟ್ ಕೊಲಾಜಿಯಂ ಗುರುವಾರ ದೆಹಲಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಒಮ್ಮತದ ಶಿಫಾರಸ್ಸು ಮಾಡಿದೆ.
ಸಿಜೆಐ ಸೇರಿದಂತೆ ಸುಪ್ರೀಂಕೋರ್ಟ್ ನಲ್ಲಿ 34 ನ್ಯಾಯಮೂರ್ತಿ ಹುದ್ದೆಗಳಿವೆ. ಪ್ರಸ್ತುತ 32 ಮಂದಿ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ವರ್ಷದ ಹಿಂದಿನವರೆಗೆ ಸುಪ್ರೀಂಕೋರ್ಟ್ ನಲ್ಲಿ ದೆಹಲಿ ಹೈಕೋರ್ಟ್ ಗೆ ಸೇರಿದ ನಾಲ್ಕು ಮಂದಿಯ ಪ್ರತಿನಿಧಿತ್ವ ಇತ್ತು. ಆದರೆ ನ್ಯಾಯಮೂರ್ತಿಗಳಾದ ಎಸ್.ಆರ್.ಭಟ್, ಸಂಜಯ್ ಕೆ ಕೌಲ್ ಮತ್ತು ಹಿಮಾ ಕೊಹ್ಲಿಯವರ ನಿವೃತ್ತಿಯೊಂದಿಗೆ ಇದು ಒಂದಕ್ಕೆ ಇಳಿಯಿತು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಏಕೈಕ ಪ್ರತಿನಿಧಿಯಾಗಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಯಾಗಿ ಡಿ. 16ರಂದು ನಿವೃತ್ತರಾಗಲಿರುವ ನ್ಯಾಯಮೂರ್ತಿ ಮನಮೋಹನ್ ಅವರನ್ನು ಸುಪ್ರೀಂಕೋರ್ಟ್ ಗೆ ನೇಮಕ ಮಾಡಲು ಗುರುವಾರ ಮಧ್ಯಾಹ್ನ ಸಭೆ ಸೇರಿದ್ದ ಕೊಲಾಜಿಯಂ ಶಿಫಾರಸ್ಸು ಮಾಡಿದೆ. ಸುಪ್ರೀಂಕೋರ್ಟ್ ಗೆ ನೇಮಕಗೊಂಡಲ್ಲಿ ನ್ಯಾಯಮೂರ್ತಿ ಮನಮೋಹನ್ ಅವರ ಅಧಿಕಾರಾವಧಿ ಮೂರು ವರ್ಷದಷ್ಟು ಹೆಚ್ಚಲಿದೆ.