ಎಪ್ರಿಲ್, ಮೇ ನಲ್ಲಿ ಇಸ್ರೇಲ್‌ಗೆ 6 ಸಾವಿರಕ್ಕೂ ಅಧಿಕ ಭಾರತೀಯ ಕಟ್ಟಡ ನಿರ್ಮಾಣ ಕಾರ್ಮಿಕರ ಆಗಮನ ನಿರೀಕ್ಷೆ

Update: 2024-04-11 15:28 GMT

ಸಾಂದರ್ಭಿಕ ಚಿತ್ರ |  PC : NDTV 

 

ಹೊಸದಿಲ್ಲಿ: ಗಾಝಾ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ರೇಲ್‌ನ ಕಟ್ಟಡ ನಿರ್ಮಾಣ ವಲಯವು ಎದುರಿಸುತ್ತಿರುವ ಕಾರ್ಮಿಕರ ಕೊರತೆಯನ್ನು ನೀಗಿಸಲು ಎಪ್ರಿಲ್‌ ಹಾಗೂ ಮೇ ತಿಂಗಳಲ್ಲಿ 6 ಸಾವಿರಕ್ಕೂ ಅಧಿಕ ಭಾರತೀಯ ಕಾರ್ಮಿಕರು ಆ ದೇಶಕ್ಕೆ ಆಗಮಿಸಲಿದ್ದಾರೆ.

ಈ ಕಾರ್ಮಿಕರನ್ನು ವಿಶೇಷ ವಿಮಾನಗಳಲ್ಲಿ ಕರೆತರಲಾಗುವುದೆಂದು ಇಸ್ರೇಲ್ ಸರಕರಾವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಸ್ರೇಲ್ ಪ್ರಧಾನಿಯ ಕಾರ್ಯಾಲಯ (ಪಿಎಂಓ), ವಿತ್ತ ಸಚಿವಾಲಯ ಹಾಗೂ ಕಟ್ಟಡ ನಿರ್ಮಾಣ ಹಾಗೂ ವಸತಿ ಸಚಿವಾಲಯದ ಜಂಟಿ ನಿರ್ಧಾರದ ಪರಿಣಾಮವಾಗಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಇಸ್ರೇಲ್ ಸರಕಾರವು ಬುಧವಾರ ಪ್ರಕಟಿಸಿದ ಹೇಳಿಕೆ ತಿಳಿಸಿದೆ.

ಕಟ್ಟಡ ನಿರ್ಮಾಣವಲಯದಲ್ಲಿ ದುಡಿಯಲು ಅತ್ಯಧಿಕ ಸಂಖ್ಯೆಯ ವಿದೇಶಿ ಕಾರ್ಮಿಕರು ಅಲ್ಪಾವಧಿಯೊಳಗೆ ಇಸ್ರೇಲ್‌ಗೆ ಆಗಮಿಸಲಿದ್ದಾರೆಂದು ಹೇಳಿಕೆಯು ತಿಳಿಸಿದೆ.

ಆಕ್ಟೋಬರ್‌ನಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಘರ್ಷ ಭುಗಿಲೆದ್ದ ಬಳಿಕ ಇಸ್ರೇಲ್‌ನ ಕಟ್ಟಡ ನಿರ್ಮಾಣ ವಲಯದಲ್ಲಿ ದುಡಿಯುತ್ತಿದ್ದ ಫೆಲೆಸ್ತೀನಿಯರ ಕೆಲಸದ ಪರ್ಮಿಟ್ ಅನ್ನು ರದ್ದುಗೊಳಿಸಲಾಗಿತ್ತು.

ಕಟ್ಟಡ ನಿರ್ಮಾಣ ವಲಯದಲ್ಲಿ 34 ಸಾವಿರ ವಿದೇಶಿ ಕಾರ್ಮಿಕರನ್ನು ಹಾಗೂ ಶುಶ್ರೂಷಾ ಸೇವಾ ವಲಯದಲ್ಲಿ 8 ಸಾವಿರ ಮಂದಿಯನ್ನು ನಿಯೋಜಿಸಲಾಗುವುದು ಎಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯವು ಕಳೆದ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಗೊಳಿಸಿದ ಹೇಳಿಕೆಯು ತಿಳಿಸಿತ್ತು. ಕಳೆದ ಆರು ತಿಂಗಳುಗಳಲ್ಲಿ ಭಾರತದ ಸುಮಾರು 800 ಕಾರ್ಮಿಕರು ಕೃಷಿ ವಲಯಕ್ಕೆ ಸೇರ್ಪಡೆಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News