ಹೆಚ್ಚಿನ ಮಹಿಳಾ ವೈದ್ಯರಿಗೆ ರಾತ್ರಿ ಪಾಳಿಗಳಲ್ಲಿ ಅಭದ್ರತೆಯ ಭಾವನೆ ಕಾಡುತ್ತದೆ: ಭಾರತೀಯ ವೈದ್ಯಕೀಯ ಸಂಘ

Update: 2024-08-30 12:33 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಹೆಚ್ಚಿನ ಮಹಿಳಾ ವೈದ್ಯರಿಗೆ ರಾತ್ರಿ ಪಾಳಿಗಳಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದ್ದು,ಕೆಲವರು ಆತ್ಮರಕ್ಷಣೆಗಾಗಿ ಆಯುಧಗಳನ್ನು ಹೊತ್ತೊಯ್ಯುವ ಅಗತ್ಯದ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ನಡೆಸಿರುವ ಅಧ್ಯಯನವು ಬಹಿರಂಗಗೊಳಿಸಿದೆ.

ಆನ್ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 3,885 ವೈದ್ಯರ ಪೈಕಿ ಶೇ.35ಕ್ಕೂ ಅಧಿಕ ವೈದ್ಯರು ಅಭದ್ರತೆಯ ಭಾವನೆಯನ್ನು ವ್ಯಕ್ತಪಡಿಸಿದ್ದು,ಇವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಶೇ.45ರಷ್ಟು ವೈದ್ಯರು ರಾತ್ರಿ ಪಾಳಿಗಳಲ್ಲಿ ಡ್ಯೂಟಿ ರೂಮ್ ಲಭ್ಯವಿರುವುದಿಲ್ಲ ಎಂದು ಹೇಳಿದ್ದಾರೆ. ಡ್ಯೂಟಿ ರೂಮ್ ಸೌಲಭ್ಯವುಳ್ಳ ವೈದ್ಯರಿಗೆ ಹೆಚ್ಚಿನ ಅಭದ್ರತೆಯ ಭಾವನೆ ಕಾಡುವುದಿಲ್ಲ ಎನ್ನುವುದನ್ನು ಸಮೀಕ್ಷೆಯು ಬೆಟ್ಟು ಮಾಡಿದೆ.

ಹೆಚ್ಚಿನ ಸಂದಣಿ, ಖಾಸಗಿತನದ ಕೊರತೆ ಮತ್ತು ಬೀಗಗಳಿಲ್ಲದಿರುವುದರಿಂದ ಡ್ಯೂಟಿ ರೂಮ್ಗಳು ಹೆಚ್ಚಾಗಿ ಅಸಮಂಜಸವಾಗಿರುತ್ತವೆ, ಹೀಗಾಗಿ ವೈದ್ಯರಿಗೆ ವಿಶ್ರಾಂತಿಗಾಗಿ ಪರ್ಯಾಯ ಸ್ಥಳಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ. ಲಭ್ಯ ಡ್ಯೂಟಿ ರೂಮಗಳ ಪೈಕಿ ಮೂರನೇ ಒಂದರಷ್ಟರಲ್ಲಿ ಶೌಚಾಲಯ ಸೌಲಭ್ಯಗಳಿಲ್ಲ ಎಂದು ವರದಿಯು ಹೇಳಿದೆ.

ಅರ್ಧಕ್ಕಿಂತ ಹೆಚ್ಚಿನ (ಶೇ.53) ನಿದರ್ಶನಗಳಲ್ಲಿ ಡ್ಯೂಟಿ ರೂಮ್ ಗಳು ವಾರ್ಡ್ ಗಳು/ಕ್ಯಾಸುವಲ್ಟಿಗಳಿಂದ ತುಂಬ ದೂರದಲ್ಲಿದ್ದವು ಎಂದೂ ವರದಿಯು ತಿಳಿಸಿದೆ.

ಶೇ.24ರಷ್ಟು ವೈದ್ಯರು ಅಭದ್ರತೆಯ ಮತ್ತು ಶೇ.11.4ರಷ್ಟು ವೈದ್ಯರು ಅತ್ಯಂತ ಅಭದ್ರತೆಯ ಭಾವನೆಯನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇಂತಹವರ ಒಟ್ಟು ಸಂಖ್ಯೆಯು ಸಮೀಕ್ಷೆಗೊಳಗಾದವರ ಮೂರನೇ ಒಂದು ಭಾಗದಷ್ಟಿದೆ.

ಕೋಲ್ಕತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಹಿನ್ನೆಲೆಯಲ್ಲಿ ರಾತ್ರಿ ಪಾಳಿಗಳಲ್ಲಿ ದುಡಿಯುವ ವೈದ್ಯರಲ್ಲಿ ಸುರಕ್ಷತಾ ಕಳವಳಗಳ ಮೌಲ್ಯಮಾಪನಕ್ಕಾಗಿ ಐಎಂಎ ನಡೆಸಿದ್ದ ಸಮೀಕ್ಷೆಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ 3,885 ವೈದ್ಯರು ಭಾಗಿಯಾಗಿದ್ದು,ಇದು ಈ ವಿಷಯದಲ್ಲಿ ದೇಶದಲ್ಲಿಯ ಅತ್ಯಂತ ದೊಡ್ಡ ಸಮೀಕ್ಷೆಯಾಗಿದೆ.

ಕೇರಳ ಐಎಂಎ ಸಂಶೋಧನಾ ಕೋಶದ ಅಧ್ಯಕ್ಷ ಡಾ.ರಾಜೀವ್ ಜಯದೇವನ್ ಮತ್ತು ಅವರ ತಂಡವು ಸಿದ್ಧಪಡಿಸಿರುವ ಅಧ್ಯಯನ ವರದಿಯು ಐಎಂಎದ ಕೇರಳ ಮೆಡಿಕಲ್ ಜರ್ನಲ್ನ ಅಕ್ಟೋಬರ್ 2024ರ ಸಂಚಿಕೆಯಲ್ಲಿ ಪ್ರಕಟಗೊಳಗೊಳ್ಳಲಿದೆ.

22 ರಾಜ್ಯಗಳಿಂದ ವೈದ್ಯರು ಸಮೀಕ್ಷೆಯಲ್ಲಿ ಭಾಗವಹಿಸಿದ್ದು,ಈ ಪೈಕಿ ಶೇ.85ರಷ್ಟು ಜನರು 35 ವರ್ಷಕ್ಕೂ ಕಡಿಮೆ ಪ್ರಾಯದವರಾಗಿದ್ದರೆ ಶೇ.61ರಷ್ಟು ಜನರು ಇಂಟರ್ನ್ಗಳು ಅಥವಾ ಸ್ನಾತಕೋತ್ತರ ಟ್ರೇನಿಗಳಾಗಿದ್ದರು. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.63ರಷ್ಟು ಮಹಿಳೆಯರಾಗಿದ್ದರು.

20ರಿಂದ 30 ವರ್ಷ ವಯೋಮಾನದ ವೈದ್ಯರಿಗೆ ಅಭದ್ರತೆಯ ಹೆಚ್ಚಿನ ಭಾವನೆ ಕಾಡುತ್ತಿದೆ.

ವೈದ್ಯರಿಗೆ ಸುರಕ್ಷತೆಯನ್ನು ಹೆಚ್ಚಿಸಲು ಭದ್ರತಾ ಸಿಬ್ಬಂದಿಗಳ ಹೆಚ್ಚಿನ ನಿಯೋಜನೆ,ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ,ಸರಿಯಾದ ಬೆಳಕಿನ ವ್ಯವಸ್ಥೆ,ಕೇಂದ್ರೀಯ ರಕ್ಷಣಾ ಕಾಯ್ದೆಯ ಜಾರಿ,ಅಲಾರ್ಮ್ ವ್ಯವಸ್ಥೆ ಅಳವಡಿಕೆ,ಸುರಕ್ಷಿತ ಡ್ಯೂಟಿ ರೂಮ್,ಹೊರಗಿನವರ ಪ್ರವೇಶಕ್ಕೆ ನಿರ್ಬಂಧ ಮತ್ತು ಮೂಲಭೂತ ಸೌಕರ್ಯಗಳ ಸುಧಾರಣೆಗಳನ್ನು ವರದಿಯು ಶಿಫಾರಸು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News