ಮರಾಠಿ ನೆಲದಲ್ಲಿ ಕನ್ನಡ ಸಂಸ್ಕೃತಿಯ ಕಂಪು ಹರಡುತ್ತಿರುವ ಕಪಸಮ ಕಾರ್ಯ ಶ್ಲಾಘನೀಯ: ಕೆ.ವಿ.ಪ್ರಭಾಕರ್

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ವಾರ್ತಾಭಾರತಿಯ ಅಂಕಣಕಾರ ಸನತ್ ಕುಮಾರ್ ಬೆಳಗಲಿ ಹಾಗೂ ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೆನ್ಸ್ ಸೀಲೋ ಅವರಿಗೆ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

Update: 2023-08-06 09:23 GMT

ಮುಂಬೈ ಆ 6: ಮರಾಠಿ ನೆಲದಲ್ಲಿ ಕನ್ನಡ ಸಂಸ್ಕೃತಿಯ ಕಂಪನ್ನು ಕಪಸಮ (ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ) ಹರಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದಾರೆ.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಕೆ.ಟಿ.ವೇಣುಗೋಪಾಲ್ ಮಾಧ್ಯಮ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮುಂಬೈನಂತಹ ಮಹಾ ನಗರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಪತ್ರಿಕೆಗಳನ್ನು ಹುಟ್ಟುಹಾಕುವುದು ಯಶಸ್ವಿಯಾಗಿ ನಡೆಸುವುದು ಬಹಳ ಸವಾಲಿನದ್ದು. ಈ ಸವಾಲನ್ನು ಕಪಸಮ ಅರ್ಥಪೂರ್ಣವಾಗಿ ನಿಭಾಯಿಸಿದೆ ಎಂದರು.

ಆಧುನಿಕ ತಂತ್ರಜ್ಞಾನ ಮಾಹಿತಿ ಜಗತ್ತು ಮತ್ತು ಪತ್ರಿಕಾ ವೃತ್ತಿಗೆ ವ್ಯಾಪಕ ಅವಕಾಶಗಳನ್ನು ತೆರೆದಿಟ್ಟಿದೆ. ಆದರೆ ಪತ್ರಕರ್ತರ ಬದುಕು ಮಾತ್ರ ಸಮಸ್ಯೆಗಳಲ್ಲೇ ಮುಳುಗಿದೆ. ಮಹಾರಾಷ್ಟ್ರ ನೆಲದಲ್ಲಿ ಕನ್ನಡ ಪತ್ರಕರ್ತರ ಸಮಸ್ಯೆಗಳಿಗೆ ಕನ್ನಡ ಪತ್ರಕರ್ತರ ಸಂಘ, ಮಹಾರಾಷ್ಟ್ರ ಬಹಳ ಹೃದಯಸ್ಪರ್ಷಿಯಾಗಿ ಸ್ಪಂದಿಸುತ್ತಿದೆ ಎನ್ನುವುದು ಸಮಾಧಾನದ ಸಂಗತಿ ಎಂದರು.

ಕಪಸಮ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಆಗಮಿಸಿದ್ದರು.

ಇದೇ ಸಂದರ್ಭ ಹಿರಿಯ ಪತ್ರಕರ್ತ, ವಾರ್ತಾಭಾರತಿಯ ಅಂಕಣಕಾರ ಸನತ್ ಕುಮಾರ್ ಬೆಳಗಲಿ ಹಾಗೂ ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೆನ್ಸ್ ಸೀಲೋ ಅವರಿಗೆ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಸುನೀತಾ ಎಂ. ಶೆಟ್ಟಿ ಅವರು ರೋಹಿಣಿ ಸಾಲ್ಯಾನ್ ಅವರ 'ದಿವ್ಯಾಂಗನೆ' ಕವನ ಸಂಕಲನ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಜಯಶ್ರೀ ಕೃಷ್ಣ ಪರಿಸರ ಸಮಿತಿ ಅಧ್ಯಕ್ಷ ಎಲ್.ವಿ.ಅಮೀನ್ ಮತ್ತಿರರು ಉಪಸ್ಥಿತರಿದ್ದರು.


 






 

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News