ಮುಂಬೈ | ಉಚಿತ ಆಹಾರ ವಿತರಿಸಲು ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಮುಸ್ಲಿಂ ಮಹಿಳೆಗೆ ಸೂಚನೆ : ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ
ಮುಂಬೈ: ‘ಜೈ ಶ್ರೀರಾಮ್’ ಘೋಷಣೆ ಕೂಗಲು ನಿರಾಕರಿಸಿದ ಮುಸ್ಲಿಂ ಮಹಿಳೆಯೊಬ್ಬಳಿಗೆ ಟಾಟಾ ಆಸ್ಪತ್ರೆಯೆದುರು ರೋಗಿಗಳು ಹಾಗೂ ಅವರ ಸಂಬಂಧಿಗಳಿಗೆ ಉಚಿತ ಆಹಾರ ವಿತರಿಸುತ್ತಿದ್ದ ವ್ಯಕ್ತಿಯೊಬ್ಬ ಆಹಾರ ವಿತರಿಸದಿರುವ ಘಟನೆ ನಡೆದಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಮಹಿಳೆಯೊಂದಿಗಿನ ಆಹಾರ ವಿತರಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಈ ಉಚಿತ ಆಹಾರವನ್ನು ಜೆರ್ಬಾಯಿ ವಾಡಿಯ ರಸ್ತೆಯಲ್ಲಿನ ಟಾಟಾ ಆಸ್ಪತ್ರೆ ಬಳಿ ಸರಕಾರೇತರ ಸಂಸ್ಥೆಯೊಂದು ವಿತರಿಸುತ್ತಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಹಿಜಾಬ್ ಧರಿಸಿದ್ದ ಮಹಿಳೆಯೊಬ್ಬರು ಉಚಿತ ಆಹಾರ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆಕೆಯನ್ನು ನೋಡಿರುವ ಆಹಾರ ವಿತರಿಸುತ್ತಿದ್ದ ವ್ಯಕ್ತಿ, ಆ ಮಹಿಳೆಗೆ ಸರತಿ ಸಾಲು ತೊರೆಯುವಂತೆ ಸೂಚಿಸಿದ್ದಾನೆ. ಆಹಾರ ಸ್ವೀಕರಿಸುವುದಕ್ಕೂ ಮುನ್ನ ‘ಜೈ ಶ್ರೀರಾಮ್’ ಘೋಷಣೆ ಕೂಗಬೇಕು ಎಂದು ಆ ಮಹಿಳೆಗೆ ಸೂಚಿಸಿದ್ದಾನೆ. ಆದರೆ, ಘೋಷಣೆ ಕೂಗಲು ನಿರಾಕರಿಸಿದ ಮಹಿಳೆಗೆ ಆತ ಆಹಾರ ವಿತರಿಸಿಲ್ಲ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಆಹಾರ ವಿತರಿಸುತ್ತಿರುವ ವ್ಯಕ್ತಿ, ರಾಮನ ಹೆಸರನ್ನು ಹೇಳಲು ಬಯಸದವರು ಸರತಿ ಸಾಲಿನಲ್ಲಿ ನಿಲ್ಲಕೂಡದು ಎಂದು ತಾಕೀತು ಮಾಡುತ್ತಿರುವುದು ಸೆರೆಯಾಗಿದೆ. ಇದರೊಂದಿಗೆ, ಆಕೆಯನ್ನು ಸರತಿ ಸಾಲು ತೊರೆಯುವಂತೆ ಸೂಚಿಸಿರುವ ಆತ, ನಿನಗೆ ಒದೆಯುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿರುವುದನ್ನು ಕಾಣಬಹುದಾಗಿದೆ. ಅದಕ್ಕೆ ಪ್ರತಿಯಾಗಿ ಆ ಮಹಿಳೆ, ನಾನು ನಿಮ್ಮಪ್ಪನ ಜಾಗದಲ್ಲಿ ನಿಂತಿಲ್ಲ ಎಂದು ಪ್ರತ್ಯುತ್ತರ ನೀಡುತ್ತಿರುವುದನ್ನೂ ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, “ಕೇವಲ ತಾವು ಬಯಸಿದ ಘೋಷಣೆ ಕೂಗಲಿಲ್ಲ ಎಂಬ ಕಾರಣಕ್ಕೇ ಆಹಾರ ನಿರಾಕರಿಸುವ ಅವರು ಸರಕಾರೇತರ ಸಂಸ್ಥೆಯಾಗಲು ಸಾಧ್ಯವಿಲ್ಲ. ಅಸಹ್ಯಕರ” ಎಂದು ಓರ್ವ ಬಳಕೆದಾರರು ಕಿಡಿ ಕಾರಿದ್ದಾರೆ.
“ಆ ಸರಕಾರೇತರ ಸಂಸ್ಥೆಗೆ ಆರೆಸ್ಸೆಸ್-ಬಿಜೆಪಿ ನಿಧಿ ಒದಗಿಸಿದ್ದರೆ ನನಗೆ ಅಚ್ಚರಿಯೇನೂ ಆಗುವುದಿಲ್ಲ. ಇದು ಭಾರತದಾದ್ಯಂತ ನಡೆಯುತ್ತಿದೆ. ಇಡೀ ವಾತಾವರಣಕ್ಕೆ ಅಂಚಿನ ಸಮುದಾಯಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದ್ವೇಷವನ್ನು ಉಣಿಸಲಾಗಿದೆ” ಎಂದು ಮತ್ತೊಬ್ಬ ಬಳಕೆದಾರರು ಖೇದ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ, ಈ ಘಟನೆಯ ಕುರಿತು ಯಾವುದೇ ಅಧಿಕೃತ ದೂರು ದಾಖಲಾಗದೆ ಇರುವುದರಿಂದ, ಆಹಾರ ವಿತರಕನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ.
ಸೌಜನ್ಯ: freepressjournal.in