ಒಳಮೀಸಲಾತಿ ಪರ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಎನ್‌ಡಿಎ ಮಿತ್ರಪಕ್ಷಗಳಲ್ಲಿ ಭಿನ್ನಾಭಿಪ್ರಾಯ, ಇಕ್ಕಟ್ಟಿನಲ್ಲಿ ಬಿಜೆಪಿ: ವರದಿ

Update: 2024-08-05 11:10 GMT

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಪರವಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕುರಿತು ಆಡಳಿತಾರೂಢ ಎನ್‌ಡಿಎದ ಎರಡು ಪ್ರಮುಖ ಮಿತ್ರಪಕ್ಷಗಳಾದ ಎಲ್‌ಜೆಪಿ(ರಾಮ ವಿಲಾಸ) ಮತ್ತು ಟಿಡಿಪಿ ಪರಸ್ಪರ ವಿರುದ್ಧ ನಿಲುವನ್ನು ತಳೆದಿದ್ದು, ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು thehindu.com ವರದಿ ಮಾಡಿದೆ.

ತನ್ನ ಪಕ್ಷವು ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಿದೆ ಎಂದು ಎಲ್‌ಜೆಪಿ(ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಪ್ರಕಟಿಸಿದ್ದಾರೆ. ಅತ್ತ ಮೊದಲಿನಿಂದಲೂ ಒಳಮೀಸಲಾತಿಯ ಪ್ರತಿಪಾದಕರಾಗಿರುವ ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

ಗುರುವಾರ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಒದಗಿಸುವ ಹಕ್ಕನ್ನು ರಾಜ್ಯಗಳು ಹೊಂದಿವೆ ಎಂದು ತನ್ನ ಬಹುಮತದ ತೀರ್ಪಿನಲ್ಲಿ ಹೇಳಿದೆ.

ತೀರ್ಪಿಗೆ ಬಿಜೆಪಿ ಇನ್ನೂ ಸ್ಪಷ್ಟವಾಗಿ ಪ್ರತಿಕ್ರಿಯಿಸಿಲ್ಲ. ಪರಿಶಿಷ್ಟ ಜಾತಿಗಳಲ್ಲಿ ಉಪ-ವರ್ಗೀಕರಣ ಮಾಡಬೇಕಾದರೆ ಸರಕಾರವು ಜಾತಿ ಗಣತಿಯನ್ನು ನಡೆಸುವುದು ಅಗತ್ಯವಾಗುತ್ತದೆ. ಪ್ರತಿಪಕ್ಷಗಳು ಜಾತಿ ಗಣತಿಗೆ ಒತ್ತಾಯಿಸುತ್ತಿದ್ದರೆ ಬಿಜೆಪಿ ಅದನ್ನು ವಿರೋಧಿಸುತ್ತಿದೆ.

ಬಿಜೆಪಿ ತೀರ್ಪನ್ನು ಸಾರಾಸಗಟಾಗಿ ತಿರಸ್ಕರಿಸಲು ಅಥವಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ,‌ ಏಕೆಂದರೆ ಒಳಮೀಸಲಾತಿಯಿಂದ ಅದು ದಕ್ಷಿಣದಲ್ಲಿ ಲಾಭ ಪಡೆಯುತ್ತದೆ. ಆದರೆ ಉತ್ತರದಲ್ಲಿ ಮಿತ್ರಪಕ್ಷಗಳಿಂದ ಮಾತ್ರವಲ್ಲ, ಮತದಾರರಿಂದಲೂ ಹಿನ್ನಡೆಯನ್ನು ನಿರೀಕ್ಷಿಸಿದೆ. ಬಿಜೆಪಿ ಮೀಸಲಾತಿಯನ್ನು ಅಂತ್ಯಗೊಳಿಸಲಿದೆ ಎಂಬ ಪ್ರತಿಪಕ್ಷಗಳ ಪ್ರಚಾರವು ಉತ್ತರದ ರಾಜ್ಯಗಳಲ್ಲಿ ಭಾರೀ ಪ್ರಭಾವ ಬೀರಿತ್ತು. ಈ ವಿಷಯದಲ್ಲಿ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆಗಳನ್ನಿರಿಸಬೇಕಿದೆ ಎಂದು ಹಿರಿಯ ಎನ್‌ಡಿಎ ನಾಯಕರೋರ್ವರು ಹೇಳಿದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ತೀರ್ಪನ್ನು ಸ್ವಾಗತಿಸಿದ್ದಾರಾದರೂ, ಕಾಂಗ್ರೆಸ್ ತೀರ್ಪಿನ ಬಗ್ಗೆ ಸ್ಪಷ್ಟ ನಿಲುವನ್ನು ತಳೆದಿಲ್ಲ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತೀರ್ಪನ್ನು ವಿರೋಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News