ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು: ನಟ ವಿಜಯ್

Update: 2024-07-03 10:14 GMT

 ನಟ ವಿಜಯ್

ಚೆನ್ನೈ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ವಿವಾದಾತ್ಮಕ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ತಮಿಳುನಾಡು ವಿಧಾನಸಭೆಯು ಗೊತ್ತುವಳಿಯೊಂದನ್ನು ಅಂಗೀಕರಿಸಿದ ಬೆನ್ನಿಗೇ, ನೀಟ್ ಪರೀಕ್ಷೆಯನ್ನು ಟೀಕಿಸಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ವಿಜಯ್, ಶೈಕ್ಷಣಿಕ ಇಲಾಖೆಗಳನ್ನು ಸಹವರ್ತಿ ಪಟ್ಟಿಯಿಂದ ಮರಳಿ ರಾಜ್ಯಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬುಧವಾರ ಚೆನ್ನೈನ ತಿರುವನ್‌ಮಿಯೂರ್‌ನಲ್ಲಿರುವ ರಾಮಚಂದ್ರ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ತಮಿಳಗ ವೆಟ್ರಿ ಕಳಗಂ ಪಕ್ಷದ ವಿಶೇಷ ಸಭೆ ಹಾಗೂ ಇತ್ತೀಚಿನ 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗೆಡೆಯಾಗಿರುವ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿಜಯ್, ದುರ್ಬಲ, ಆರ್ಥಿಕವಾಗಿ ಹಿಂದುಳಿದ ಹಾಗೂ ದಮನಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಮೇಲೆ ನೀಟ್ ಪರೀಕ್ಷೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿವರಿಸಿದರು. ನೀಟ್ ಪರೀಕ್ಷೆಯಿಂದ ಮೂರು ಮುಖ್ಯ ಸಮಸ್ಯೆಗಳುಂಟಾಗುತ್ತಿವೆ ಎಂದೂ ಅವರು ಹೇಳಿದರು.

"ಮೊದಲಿಗೆ ಇದು ರಾಜ್ಯಗಳ ಸರಕಾರಗಳ ಹಕ್ಕಿಗೆ ವಿರುದ್ಧವಾಗಿದೆ. 1975ರವರೆಗೆ ಶಿಕ್ಷಣವು ರಾಜ್ಯ ಪಟ್ಟಿಯಲ್ಲಿತ್ತು. ಇದಾದ ನಂತರ ಕೇಂದ್ರ ಸರಕಾರವು ಶಿಕ್ಷಣವನ್ನು ಸಹವರ್ತಿ ಪಟ್ಟಿಗೆ ಸೇರಿಸಿತು. ಇಲ್ಲಿಂದಲೇ ಸಮಸ್ಯೆ ಪ್ರಾರಂಭವಾಯಿತು ಎಂದು ನನ್ನ ಭಾವನೆ" ಎಂದು ಅವರು ಅಭಿಪ್ರಾಯ ಪಟ್ಟರು.

"ಒಂದು ದೇಶ, ಒಂದು ಪಠ್ಯಕ್ರಮ ಯೋಜನೆ, ಒಂದು ಪರೀಕ್ಷೆ" ನೀತಿಯು ಶಿಕ್ಷಣದ ಮೂಲಭೂತ ಆಶಯಕ್ಕೆ ವಿರುದ್ಧವಾಗಿದೆ. ಯಾಕೆಂದರೆ, ಪಠ್ಯಕ್ರಮ ಯೋಜನೆಯನ್ನು ರಾಜ್ಯಗಳಿಗೆ ತಕ್ಕಂತೆ ಮರು ವಿನ್ಯಾಸಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

"ನಾನು ಈ ಬೇಡಿಕೆಯನ್ನು ರಾಜ್ಯಗಳ ಹಕ್ಕನ್ನು ಮರಳಿ ಕೊಡಿಸಲು ಮಾತ್ರ ಇಡುತ್ತಿಲ್ಲ. ಬದಲಿಗೆ ವಿದ್ಯಾರ್ಥಿಗಳು ವಿವಿಧ ಗ್ರಹಿಕೆಗಳ ಮೂಲಕ ಸಂಗತಿಗಳತ್ತ ನೋಡಲು ಶೈಕ್ಷಣಿಕ ವ್ಯವಸ್ಥೆಯು ಪ್ರೋತ್ಸಾಹ ನೀಡಬೇಕು ಎಂಬ ಕಾರಣಕ್ಕೆ ಇಡುತ್ತಿದ್ದೇನೆ. ವೈವಿಧ್ಯತೆ ಶಕ್ತಿಯೇ ಹೊರತು ದೌರ್ಬಲ್ಯವಲ್ಲ" ಎಂದು ಅವರು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News