ನೀಟ್-ಯುಜಿ ಅವ್ಯವಹಾರ | ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್ ಐ ಟಿ ತನಿಖೆಗೆ ಆಪ್ ಆಗ್ರಹ
ಹೊಸದಿಲ್ಲಿ: ನೀಟ್-ಯುಜಿ ಪರೀಕ್ಷೆಗಳಲ್ಲಿ ಅವ್ಯವಹಾರಗಳ ಆರೋಪಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (SIT)ದಿಂದ ತನಿಖೆಗೆ ಆಗ್ರಹಿಸಿರುವ ಆಮ್ ಆದ್ಮಿ ಪಾರ್ಟಿ (ಆಪ್)ಯು,ಇದು ದೇಶದ ಯುವಜನತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ ಎಂದು ಹೇಳಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಆಪ್ ನಾಯಕ ಜಾಸ್ಮಿನ್ ಶಾ ಅವರು, ಪರೀಕ್ಷೆಯಲ್ಲಿ ‘ಬೃಹತ್ ಹಗರಣ’ವನ್ನು ಬೆಟ್ಟು ಮಾಡಿರುವ ಹೆಚ್ಚಿನ ದೂರುಗಳು ಕೇಸರಿ ಪಕ್ಷದ ಆಡಳಿತವಿರುವ ರಾಜ್ಯಗಳಿಂದಲೇ ಬಂದಿವೆ. ಪ್ರಶ್ನೆಪತ್ರಿಕೆ ಸೋರಿಕೆಯ ವರದಿಗಳು ಮೊದಲು ಬಿಹಾರ ಮತ್ತು ಗುಜರಾತಿನಿಂದ ಬಂದಿದ್ದವು. ನಂತರ ನೀಟ್-ಯುಜಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿರುವ 67 ಅಭ್ಯರ್ಥಿಗಳ ಪೈಕಿ ಆರು ಜನರು ಹರ್ಯಾಣದ ಝಝ್ಝರ್ನಲ್ಲಿಯ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು ಎನ್ನುವುದು ಬಹಿರಂಗಗೊಂಡಿದೆ ಎಂದು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಶ್ನೆಗಳ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮೌನವಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಕೃಪಾಂಕಗಳನ್ನು ನೀಡಿರುವುದು ವಿವರಣೆಗೆ ನಿಲುಕುತ್ತಿಲ್ಲ ಮತ್ತು ಅದರಲ್ಲಿ ಯಾವುದೇ ಪಾರದರ್ಶಕತೆಯಿಲ್ಲ ಎಂದು ಹೇಳಿದ ಅವರು,ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಮತ್ತು ಆಪ್ ಅವರ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.