ಏಪ್ರಿಲ್ 1 ರಿಂದ ನೂತನ ಆರ್ಥಿಕ ವರ್ಷ ; ಏನೆಲ್ಲಾ ಬದಲಾವಣೆಯಾಲಿದೆ?

ಸಾಂದರ್ಭಿಕ ಚಿತ್ರ | PC : freepik.com
ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗುತ್ತದೆ. ಏಪ್ರಿಲ್ 1 ರಿಂದ ಆದಾಯ ತೆರಿಗೆಯಿಂದ ಕ್ರೆಡಿಟ್ ಕಾರ್ಡ್ ವರೆಗೆ ಕೆಲ ನಿಯಮಗಳಲ್ಲಿ ಬದಲಾವಣೆಯಾಗಲಿದೆ.
ಪ್ರತಿ ತಿಂಗಳ ಮೊದಲ ತಾರೀಖಿನಂದು ಕೆಲವು ಬದಲಾವಣೆಗಳಾಗುವುದು ಸಾಮಾನ್ಯವಾಗಿದ್ದರೂ, ಹಣಕಾಸು ಜಗತ್ತಿನಲ್ಲಿ ಏಪ್ರಿಲ್ 1 ಬಹಳ ಮಹತ್ವದ್ದಾಗಿದೆ. ಏಕೆಂದರೆ ಏಪ್ರಿಲ್ 1 ರಿಂದ ಸಾಮಾನ್ಯ ಬಜೆಟ್ ನಲ್ಲಿ ಘೋಷಿಸಲಾದ ನಿರ್ಧಾರಗಳು ಜಾರಿಗೆ ಬರುತ್ತವೆ. ಹಾಗಾಗಿ ಅದು, ನಮ್ಮ ಜೇಬಿನ ಮೇಲೆ ಮತ್ತು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
ಈ ಸಲ ಅನೇಕ ದೊಡ್ಡ ಬದಲಾವಣೆಗಳು ಆಗಲಿವೆ. ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ, ತೆರಿಗೆ, ಬ್ಯಾಂಕಿಂಗ್, ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಮತ್ತು ಬದಲಾವಣೆಗಳು ಜಾರಿಗೆ ಬರುತ್ತವೆ.
ಏಪ್ರಿಲ್ 1 ರಿಂದ ಆದಾಯ ತೆರಿಗೆ ನಿಯಮಗಳು ಬದಲಾಗಲಿವೆ. ಕೆಲವು ಬ್ಯಾಂಕ್ ಗಳು ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ಬದಲಾಯಿಸಿವೆ. ಫೆಬ್ರವರಿಯಲ್ಲಿ ಮಂಡಿಸಲಾದ ಬಜೆಟ್ ನಲ್ಲಿ ಮೋದಿ ಸರ್ಕಾರ ತೆರಿಗೆದಾರರಿಗೆ ದೊಡ್ಡ ಪರಿಹಾರ ಘೋಷಿಸಿತ್ತು. ಅದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಈಗ ಮೂಲ ವಿನಾಯಿತಿ ಮಿತಿಯನ್ನು 3 ಲಕ್ಷದಿಂದ 4 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಹೊಸ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡವರು ಏಪ್ರಿಲ್ 1 ರಿಂದ 12 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಸಂಬಳ ಪಡೆಯುವವರು 12,75,000 ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.
ಇದು ಮಧ್ಯಮ ವರ್ಗಕ್ಕೆ ದೊಡ್ಡ ಲಾಭ ಎಂದು ಹೇಳಲಾಗುತ್ತಿದೆ. ಈ ಹಿಂದೆ, ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇರಲಿಲ್ಲ. ಮಧ್ಯಮ ವರ್ಗದವರಿಗೆ ಮಾತ್ರವಲ್ಲ, ಏಪ್ರಿಲ್ 1 ರಿಂದ ದೊಡ್ಡ ಆದಾಯವಿರುವವರಿಗೂ ಲಾಭವಿದೆ.
24 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುವವರು ಶೇ. 30 ತೆರಿಗೆ ಪಾವತಿಸಬೇಕಾಗುತ್ತದೆ. ಈ ಹಿಂದೆ 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವಿದ್ದರೆ ಶೇ.30 ತೆರಿಗೆ ಪಾವತಿಸಬೇಕಿತ್ತು.
ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವ ನಿಯಮಗಳು ಇನ್ನಷ್ಟು ಕಠಿಣವಾಗಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳು ಕನಿಷ್ಠ ಬ್ಯಾಲೆನ್ಸ್ ಗೆ ಸಂಬಂಧಿಸಿದ ಷರತ್ತುಗಳನ್ನು ಬದಲಾಯಿಸಿವೆ.
ಈ ಬ್ಯಾಂಕುಗಳ ಗ್ರಾಹಕರು ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಪ್ರಕಾರ ತಮ್ಮ
ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ. ಹಾಗೆ ಮಾಡದ ಗ್ರಾಹಕರು ದಂಡ ಪಾವತಿಸಬೇಕಾಗಬಹುದು. ಈ ದಂಡದ ಮೊತ್ತವು ಬ್ಯಾಂಕ್ ಖಾತೆಯ ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆ.
ವರದಿಗಳ ಪ್ರಕಾರ, ಈಗ ಈ ಬ್ಯಾಂಕುಗಳ ಗ್ರಾಹಕರು ನಗರ ಪ್ರದೇಶಗಳಲ್ಲಿ 5,000 ರೂ ಮತ್ತು
ಗ್ರಾಮೀಣ ಪ್ರದೇಶಗಳಲ್ಲಿ 2000 ರೂ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗಬಹುದು ಎನ್ನಲಾಗಿದೆ. ಆದರೆ ಈ ಬಗ್ಗೆ ಬ್ಯಾಂಕ್ ಗಳು ಇನ್ನೂ ಯಾವುದೇ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ.
ದೇಶಾದ್ಯಂತ ಕ್ರೆಡಿಟ್ ಕಾರ್ಡ್ ಗಳನ್ನು ನೀಡುವಲ್ಲಿ ಎರಡನೇ ಸ್ಥಾನದಲ್ಲಿರುವ ಎಸ್ಬಿಐ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳಿಗೆ ನೀಡುವ ರಿವಾರ್ಡ್ ಯೋಜನೆಗಳಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಿದೆ. ಈ ಬದಲಾವಣೆಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.
ಈ ಬದಲಾವಣೆಗಳು ಕ್ಲಬ್ ವಿಸ್ತಾರಾ ಎಸ್ಬಿಐನಂತಹ ಎಸ್ಬಿಐನ ಕೆಲ ಜನಪ್ರಿಯ ಕ್ರೆಡಿಟ್ ಕಾರ್ಡ್ ಗಳ ಮೇಲೆ ಪರಿಣಾಮ ಬೀರುತ್ತವೆ. ಇದಲ್ಲದೆ, ಹಲವು ರೀತಿಯ ಖರೀದಿಗಳ ಮೇಲಿನ ರಿವಾರ್ಡ್ ಪಾಯಿಂಟ್ ಗಳಲ್ಲಿ ಕಡಿತ ಸಹ ಘೋಷಿಸಲಾಗಿದೆ. ಏರ್ ಇಂಡಿಯಾದ ಟಿಕೆಟ್ ಗಳನ್ನು ಬುಕ್ ಮಾಡುವಾಗ ಬ್ಯಾಂಕ್ ಈಗ ಕಡಿಮೆ ಅಂಕಗಳನ್ನು ನೀಡುತ್ತದೆ. ಆದರೆ ಕಾರ್ಡ್ ನವೀಕರಣದ ಸಮಯದಲ್ಲಿ ವಿಧಿಸಲಾಗುತ್ತಿದ್ದ ಸುಮಾರು 3000 ರೂ. ಶುಲ್ಕವನ್ನು ಬ್ಯಾಂಕ್ ಮನ್ನಾ ಮಾಡಿದೆ.
ಎಸ್ಬಿಐ ಜೊತೆಗೆ, ಆಕ್ಸಿಸ್ ಬ್ಯಾಂಕ್ ತನ್ನ ವಿಸ್ತಾರಾ ಕ್ರೆಡಿಟ್ ಕಾರ್ಡ್ ನ ನಿಯಮಗಳು ಮತ್ತು ಕೊಡುಗೆಗಳಲ್ಲಿ ತಿದ್ದುಪಡಿಗಳನ್ನು ತಂದಿದೆ ಎಂದು ಹೇಳಲಾಗುತ್ತದೆ.
ಬ್ಯಾಂಕ್ ಪ್ರಕಾರ, ಏಪ್ರಿಲ್ 18 ರಂದು ಅಥವಾ ನಂತರ ಕಾರ್ಡ್ ಗಳನ್ನು ನವೀಕರಿಸಬೇಕಾದ ಗ್ರಾಹಕರಿಗೆ ವಾರ್ಷಿಕ ಶುಲ್ಕ ಇರುವುದಿಲ್ಲ. ಏಪ್ರಿಲ್ 18 ರ ಮೊದಲು ತಮ್ಮ ಕಾರ್ಡ್ ಗಳನ್ನು ನವೀಕರಿಸಬೇಕಾದ ಗ್ರಾಹಕರು ಈ ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತ ಮಹಾರಾಜ ಕ್ಲಬ್ ಸದಸ್ಯತ್ವ ಮತ್ತು ಕೆಲವು ಸ್ಥಿರ ಖರ್ಚುಗಳ ಮೇಲೆ ಉಚಿತಗಳಂತಹ ಕೆಲವು ವಿಶೇಷ ಪ್ರಯೋಜನಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಹೇಳುತ್ತದೆ.
FD ಗಳಿಂದ ಬಡ್ಡಿ ಪಡೆಯುವ ಹಿರಿಯ ನಾಗರಿಕರಿಗೆ ಸರ್ಕಾರ ದೊಡ್ಡ ಪರಿಹಾರ ನೀಡಿದೆ. ಬಜೆಟ್ ನಲ್ಲಿ TDS ನಿಯಮಗಳಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದ್ದು, ಈ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.
ಬಡ್ಡಿ ಆದಾಯದ ಮೇಲಿನ TDS ವಿನಾಯಿತಿ ಮಿತಿಯನ್ನು ಏಪ್ರಿಲ್ 1 ರಿಂದ ಹೆಚ್ಚಿಸಲಾಗಿದೆ.ಏಪ್ರಿಲ್ 1 ರಿಂದ FD, RD ಇತ್ಯಾದಿಗಳ ಮೇಲಿನ 1 ಲಕ್ಷ ರೂ.ವರೆಗಿನ ಬಡ್ಡಿ ಆದಾಯದ ಮೇಲೆ TDS ಕಡಿತ ಇರುವುದಿಲ್ಲ. ಇಲ್ಲಿಯವರೆಗೆ ಈ ಮಿತಿ 500 ರೂ.ಗಳಷ್ಟಿತ್ತು. ಆದರೆ ಈಗ ಹಿರಿಯ ನಾಗರಿಕರಿಗೆ ಈ ಮಿತಿ ಡಬಲ್ ಮಾಡಲಾಗಿದೆ.
FD ಯಿಂದ ಬರುವ ಬಡ್ಡಿಯಿಂದ ಜೀವನ ಸಾಗಿಸುವ ಹಿರಿಯ ನಾಗರಿಕರು ಬಹಳಷ್ಟು ಪ್ರಯೋಜನ ಪಡೆಯುತ್ತಾರೆ. ಅಲ್ಲದೆ, ಹಿರಿಯ ನಾಗರಿಕರಲ್ಲದವರು ಇನ್ನು ಮುಂದೆ FD ಅಥವಾ RD ಯಿಂದ 50,000 ರೂ ವರೆಗೆ ತೆರಿಗೆ ಪಾವತಿಸಬೇಕಾಗಿಲ್ಲ.
ಈ ಹಿಂದೆ ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳಲ್ಲಿ 40,000 ವರೆಗಿನ ಬಡ್ಡಿ ಆದಾಯದ ಮೇಲೆ ಟಿಡಿಎಸ್ ವಿಧಿಸಲಾಗುತ್ತಿರಲಿಲ್ಲ.ಆದರೆ ಈ ವರ್ಷದ ಬಜೆಟ್ ನಲ್ಲಿ ಸರ್ಕಾರ ಈ ಮಿತಿ ಹೆಚ್ಚಿಸಿದೆ. ಬಜೆಟ್ ನಲ್ಲಿ, ವಿಮಾ ಏಜೆಂಟ್ ಗಳು ಮತ್ತು ದಲ್ಲಾಳಿಗಳು ಪಡೆಯುವ ಕಮಿಷನ್ನ ಮೇಲಿನ ಟಿಡಿಎಸ್ ಮಿತಿಯನ್ನು ಹೆಚ್ಚಿಸಲಾಗಿದೆ.ಸರ್ಕಾರ ವಿಮಾ ಕಮಿಷನ್ನ ಟಿಡಿಎಸ್ ಮಿತಿಯನ್ನು 15,000 ರೂ ಗಳಿಂದ 20,000 ಕ್ಕೆ ಹೆಚ್ಚಿಸಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೂ ಈ ರಿಯಾಯ್ತಿ ಲಭ್ಯವಿದೆ. ಡಿವಿಡೆಂಡ್ ಆದಾಯದ ಮೇಲಿನ ಟಿಡಿಎಸ್ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗಿದೆ. ಮ್ಯೂಚುವಲ್ ಫಂಡ್ ಅಥವಾ ಷೇರುಗಳಿಂದ ಡಿವಿಡೆಂಡ್ ಆದಾಯ 10,000 ರೂ ವರೆಗೆ ಇದ್ದರೆ ಟಿಡಿಎಸ್ ಪಾವತಿಸಬೇಕಾಗಿಲ್ಲ.ಮೊದಲು ಈ ಮಿತಿ 5,000 ರೂ ವರೆಗೆ ಮಾತ್ರ ಇತ್ತು.
ಏಪ್ರಿಲ್ 1ರಿಂದ RBI ನ ಉದಾರೀಕೃತ ರವಾನೆ ಯೋಜನೆ, ಅಂದರೆ LRS ಅಡಿಯಲ್ಲಿ, ಅಂದರೆ ವಿದೇಶದಲ್ಲಿ ಓದುತ್ತಿರುವ ಮಕ್ಕಳ ಶುಲ್ಕ ಅಥವಾ ಇತರ ವೆಚ್ಚಗಳಿಗಾಗಿ 10 ಲಕ್ಷದ ವರೆಗೆ ಕಳಿಸಿದರೆ ಯಾವುದೇ ಟಿಡಿಎಸ್ ಪಾವತಿಸಬೇಕಾಗಿಲ್ಲ.
ಇಲ್ಲಿಯವರೆಗೆ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ 7 ಲಕ್ಷಕ್ಕಿಂತ ಹೆಚ್ಚು ಕಳುಹಿಸಲು ಶೇ.5 ರಷ್ಟು ಪಾವತಿಸಬೇಕಾಗಿತ್ತು. ಇನ್ನು ಯುಪಿಐ ಮೂಲಕ ವಹಿವಾಟುಗಳ ಸುರಕ್ಷತೆ ಹೆಚ್ಚಿಸಲು ಸರ್ಕಾರ ಹೊಸ ನಿಯಮಗಳನ್ನು ತಂದಿದೆ. ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಪ್ರಕಾರ, ಬ್ಯಾಂಕುಗಳು, ಯುಪಿಐ ಪಾವತಿ ಅಪ್ಲಿಕೇಶನ್ಗಳು ಮತ್ತು ಮೂರನೇ ವ್ಯಕ್ತಿಯ ಯುಪಿಐ ಸೇವಾ ಪೂರೈಕೆದಾರರು ಪ್ರತಿ ವಾರ ತಮ್ಮ ಡೇಟಾ ನವೀಕರಿಸಬೇಕಾಗುತ್ತದೆ.
ದೂರಸಂಪರ್ಕ ಇಲಾಖೆ ಹೊರಡಿಸಿದ ಹೊಸ ನಿಯಮಗಳ ಪ್ರಕಾರ, ಒಂದು ಮೊಬೈಲ್ ಸಂಖ್ಯೆಯನ್ನು 90 ದಿನಗಳವರೆಗೆ ಬಳಸದಿದ್ದರೆ, ಟೆಲಿಕಾಂ ಕಂಪನಿ ಅದನ್ನು ಬೇರೆಯವರಿಗೆ ನೀಡಬಹುದು. ಸಾಮಾನ್ಯವಾಗಿ, ಗ್ರಾಹಕರು ಮೊಬೈಲ್ ಸಂಖ್ಯೆಗೆ ಯಾವುದೇ ಕರೆ ಅಥವಾ ಸಂದೇಶವನ್ನು ಮಾಡದಿದ್ದರೆ ಅಥವಾ 3 ತಿಂಗಳ ಕಾಲ ಇಂಟರ್ನೆಟ್ ಡೇಟಾವನ್ನು ಬಳಸದಿದ್ದರೆ, ಟೆಲಿಕಾಂ ಕಂಪನಿ ಅದನ್ನು ನಿಷ್ಕ್ರಿಯಗೊಳಿಸುತ್ತದೆ.
ಏಪ್ರಿಲ್ 1 ರಿಂದ, ಬ್ಯಾಂಕುಗಳು ಮತ್ತು ಯುಪಿಐ ಅಪ್ಲಿಕೇಶನ್ಗಳು ವಾರಕ್ಕೊಮ್ಮೆಯಾದರೂ ಗ್ರಾಹಕರ ಮೊಬೈಲ್ ಸಂಖ್ಯೆಯ ದಾಖಲೆಗಳನ್ನು ಪರಿಶೀಲಿಸಿ ನವೀಕರಿಸುತ್ತವೆ. ಬದಲಾದ ಮೊಬೈಲ್ ಸಂಖ್ಯೆಗಳಿಂದ ಯಾವುದೇ ತಪ್ಪು ವಹಿವಾಟುಗಳು ನಡೆಯುವುದನ್ನು ತಡೆಯಲು ಹೀಗೆ ಮಾಡಲಾಗುತ್ತದೆ.
ಅನೇಕ ಕಾರು ಕಂಪನಿಗಳು ಏಪ್ರಿಲ್ 1 ರಿಂದ ತಮ್ಮ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಘೋಷಿಸಿವೆ.
ವರದಿಗಳ ಪ್ರಕಾರ, ಮಹೀಂದ್ರಾ & ಮಹೀಂದ್ರಾ ತನ್ನ SUV ಮತ್ತು ವಾಣಿಜ್ಯ ವಾಹನ ಶ್ರೇಣಿಯ ಬೆಲೆಗಳನ್ನು ಶೇ. 3 ರಷ್ಟು ಹೆಚ್ಚಿಸಲಿದೆ. ಟಾಟಾ ಮೋಟಾರ್ಸ್ ಕೂಡ ಬೆಲೆಗಳನ್ನು ಶೇ. 3 ರಷ್ಟು ಹೆಚ್ಚಿಸಲಿದೆ. ಮಾರುತಿ ಸುಜುಕಿ ತನ್ನ ಎಲ್ಲಾ ಮಾದರಿಗಳ ಬೆಲೆಗಳನ್ನು ಮತ್ತೊಮ್ಮೆ ಹೆಚ್ಚಿಸುವುದಾಗಿ ಘೋಷಿಸಿದೆ. ಆದರೆ ಏಪ್ರಿಲ್ನಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬುದನ್ನು ಕಂಪನಿ ಇನ್ನೂ ತಿಳಿಸಿಲ್ಲ.
ಇನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್ಪಿಜಿ, ಸಿಎನ್ಜಿ ಮತ್ತು ಪಿಎನ್ಜಿ ಬೆಲೆಗಳಲ್ಲಿ ಬದಲಾವಣೆ ಇರುತ್ತದೆ. ಮಾರ್ಚ್ 1 ರಂದು ಎಲ್ಪಿಜಿ ಸಿಲಿಂಡರ್ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿತ್ತು. 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಹೆಚ್ಚಿಸಲಾಯಿತು. ಮಾರ್ಚ್ 1 ರಂದು, 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ನ ಬೆಲೆಯನ್ನು 6 ರೂ ಹೆಚ್ಚಿಸಲಾಗಿತ್ತು. ಆದರೆ 14.2 ಕೆಜಿ ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರಲಿಲ್ಲ.