ಸಂದೇಶ್ ಖಾಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹಣ ಸ್ವೀಕರಿಸಿದ ಮಹಿಳೆಯರು: ಬಿಜೆಪಿ ನಾಯಕನದ್ದು ಎನ್ನಲಾದ ವಿಡಿಯೋ ವೈರಲ್
ಕೋಲ್ಕತ್ತಾ: ಲೈಂಗಿಕ ಕಿರುಕುಳ ಹಾಗೂ ಭೂಕಬಳಿಕೆ ಪ್ರಕರಣದ ಆರೋಪಿಗಳಾಗಿರುವ ಸ್ಥಳೀಯ ಟಿಎಂಸಿ ಸತ್ರಾಪ್ ಶಹಜಹಾನ್ ಶೇಖ್ ಹಾಗೂ ಅವರ ಸಂಗಡಿಗರ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು 70ಕ್ಕೂ ಹೆಚ್ಚು ಮಹಿಳೆಯರು ತಲಾ ರೂ. 2,000 ಸ್ವೀಕರಿಸಿದ್ದರು ಎಂದು ಸ್ಥಳೀಯ ಬಿಜೆಪಿ ನಾಯಕರೊಬ್ಬರು ಹೇಳುತ್ತಿರುವ ವಿಡಿಯೊ ವೈರಲ್ ಆಗಿದೆ.. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
45 ನಿಮಿಷಗಳ ಅವಧಿಯ ಈ ವಿಡಿಯೊದಲ್ಲಿ ಸಂದೇಶ್ ಖಾಲಿ ಮಂಡಲ್ ಅಧ್ಯಕ್ಷ ಗಂಗಾಧರ್ ಕಯಾಲ್ ರನ್ನು ಹೋಲುವಂತಿರುವ ವ್ಯಕ್ತಿಯೊಬ್ಬರು ಈ ಸಂಗತಿಯನ್ನು ತನ್ನನ್ನು ಪ್ರಶ್ನಿಸಿದ ವ್ಯಕ್ತಿಗೆ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಕೆಲವು ವಾರಗಳ ಹಿಂದೆ ಬಿಡುಗಡೆಯಾಗಿದ್ದ ಸರಣಿ ವಿಡಿಯೊಗಳ ಪೈಕಿ ಒಂದು ವಿಡಿಯೊದಲ್ಲಿ ಅತ್ಯಾಚಾರ ಆರೋಪಗಳನ್ನು ಸೃಷ್ಟಿಸಲಾಗಿತ್ತು ಎಂದು ಕಯಾಲ್ ಅವರೇ ಹೇಳಿಕೆ ನೀಡಿದ್ದರು.
ಆದರೆ, ಈ ವಿಡಿಯೊಗಳ ನೈಜತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು PTI ಸುದ್ದಿ ಸಂಸ್ಥೆ ಸ್ಪಷ್ಟಪಡಿಸಿದೆ.
ಶನಿವಾರ ರಾತ್ರಿ ಬಿಡುಗಡೆಯಾಗಿರುವ ಹೊಸ ವಿಡಿಯೊದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾಗಿರುವ ಶೇಖ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 70 ಮಹಿಳೆಯರು ತಲಾ ರೂ. 2,000 ಸ್ವೀಕರಿಸಿದ್ದಾರೆ ಎಂದು ಕಯಾಲ್ ಹೇಳುತ್ತಿರುವುದು ಕಂಡು ಬಂದಿದೆ.
ಈ ಕುರಿತ ಪ್ರತಿಕ್ರಿಯೆಗೆ ಕಯಾಲ್ ಅಲಭ್ಯರಾಗಿದ್ದರೆ, ಈ ವಿಡಿಯೊ ನಕಲಿ ಎಂದು ಬಿಜೆಪಿ ಆರೋಪಿಸಿದೆ.
ಸಂದೇಶ್ ಖಾಲಿ ಕುರಿತ ಬಿಜೆಪಿಯ ಅಪಪ್ರಚಾರದ ವಾಸ್ತವಾಂಶವು ಬುಟ್ಟಿಯಿಂದ ಹೊರಗೆ ಬರುತ್ತಿದೆ ಎಂದು ಟಿಎಂಸಿ ವಕ್ತಾರ ರಿಜು ದತ್ತಾ ಹೇಳಿದ್ದಾರೆ.
ಸಂದೇಶ್ ಖಾಲಿ ಮಹಿಳೆಯರ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೊಗಳನ್ನು ಕಳೆದ ಕೆಲವು ದಿನಗಳಿಂದ ಟಿಎಂಸಿ ಹಂಚಿಕೊಳ್ಳುತ್ತಿದೆ.