ಲೋಕಸಭಾ ಚುನಾವಣೆಗೂ ಮೊದಲೇ ಸಿಎಎ ಜಾರಿ: ಅಮಿತ್ ಶಾ
ಹೊಸದಿಲ್ಲಿ: ಲೋಕಸಭಾ ಚುನಾವಣೆಯೊಳಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಲಾಗುವುದು ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಇದು ದೇಶದ ಕಾಯ್ದೆ” ಎಂದು ಪ್ರತಿಪಾದಿಸಿದ್ದಾರೆ. ಈ ಕಾಯ್ದೆಯ ಉದ್ದೇಶ ಪೌರತ್ವವನ್ನು ನೀಡುವುದೇ ಹೊರತು ಯಾರದ್ದಾದರೂ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ ಎಂದೂ ಅವರು ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.
ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ET Now-ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, “ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಕಾಯ್ದೆಯಾಗಿದೆ. ಅದರ ಅಧಿಸೂಚನೆಯನ್ನು ಚುನಾವಣೆಗೂ ಮುನ್ನವೇ ಹೊರಡಿಸಲಾಗುತ್ತದೆ. ಅದರ ಕುರಿತು ಯಾವುದೇ ಗೊಂದಲದ ಅಗತ್ಯವಿಲ್ಲ. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾರದ್ದಾದರೂ ಪೌರತ್ವವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಕಾಯ್ದೆಯಲ್ಲಿ ಅಂತಹ ಅವಕಾಶವೇ ಇಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾಗಿ ದೇಶಕ್ಕೆ ಆಗಮಿಸಿರುವ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರಕಾರವು ತಾನು ಈ ಹಿಂದೆ ನೀಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಭರವಸೆಯಿಂದ ಹಿಂದೆ ಸರಿಯುತ್ತಿದೆ ಎಂದೂ ಅಮಿತ್ ಶಾ ಆರೋಪಿಸಿದ್ದಾರೆ.
“ಪೌರತ್ವ ತಿದ್ದುಪಡಿ ಕಾಯ್ದೆಯು ಕಾಂಗ್ರೆಸ್ ಸರಕಾರದ ಭರವಸೆಯಾಗಿತ್ತು. ದೇಶವು ವಿಭಜನೆಯಾದಾಗ, ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾಗಿದ್ದರು. ಆಗ ನಿರಾಶ್ರಿತರನ್ನು ದೇಶಕ್ಕೆ ಸ್ವಾಗತಿಸಲಾಗುವುದು ಎಂದು ಭರವಸೆ ನೀಡಿದ್ದ ಕಾಂಗ್ರೆಸ್, ಅವರಿಗೆ ಭಾರತೀಯ ಪೌರತ್ವವನ್ನು ನೀಡುವುದಾಗಿ ಹೇಳಿತ್ತು.” ಎಂದು ಅಮಿತ್ ಶಾ ಹೇಳಿದ್ದಾರೆ.