ಜೀವ ಬೆದರಿಕೆ: ವಿಚಾರಣೆಗೆ ಹಾಜರಾಗುವುದರಿಂದ ಮಾಜಿ ರಾ ಅಧಿಕಾರಿಗೆ ವಿನಾಯಿತಿ ನೀಡಿದ ಕೋರ್ಟ್
ಹೊಸದಿಲ್ಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರ್ಪತ್ವಂತ್ ಸಿಂಗ್ ಪನ್ನುನ್ ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಅಮೆರಿಕದ ನ್ಯಾಯ ಇಲಾಖೆಯಿಂದ ಕೊಲೆ ಸುಪಾರಿ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪವನ್ನು ಎದುರಿಸುತ್ತಿರುವ ಸಂಶೋಧನಾ ಮತ್ತು ವಿಶ್ಲೇಷಣಾ ಘಟಕ (ರಾ)ದ ಮಾಜಿ ಅಧಿಕಾರಿ ವಿಕಾಸ್ ಯಾದವ್ ಅವರು ತನಗೆ ಜೀವ ಬೆದರಿಕೆಯಿರುವುದರಿಂದ ತನ್ನ ವಿರುದ್ಧ ದಾಖಲಾಗಿರುವ ಪ್ರತ್ಯೇಕ ಹಫ್ತಾ ವಸೂಲಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ನ್ಯಾಯಾಲಯವು ಪುರಸ್ಕರಿಸಿದೆ ಎಂದು ಸುದ್ದಿಸಂಸ್ಥೆಯು ರವಿವಾರ ವರದಿ ಮಾಡಿದೆ.
ದಿಲ್ಲಿ ಪೋಲಿಸರು ಹಫ್ತಾ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 2023,ಡಿ.18ರಂದು ಯಾದವರನ್ನು ಬಂಧಿಸಿದ್ದರು. ಇದಕ್ಕೂ ಮುನ್ನ ಅ.18ರಂದು ಅಮೆರಿಕದಲ್ಲಿ ಸಿಖ್ಸ್ ಫಾರ್ ಜಸ್ಟೀಸ್ ನ ಮುಖ್ಯಸ್ಥ ಗುರ್ಪತ್ವಂತ್ ಸಿಂಗ್ ಪನ್ನುನ್ ಕೊಲೆಗೆ ರೂಪಿಸಲಾಗಿತ್ತು ಎನ್ನಲಾದ ವಿಫಲ ಸಂಚಿನಲ್ಲಿ ಯಾದವರನ್ನು ಹೆಸರಿಸಲಾಗಿತ್ತು. ಇವೆರಡೂ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿರುವಂತೆ ಕಂಡು ಬರುತ್ತಿಲ್ಲ.
ಹಫ್ತಾ ವಸೂಲಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಯಾದವ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಫೆ.3ರಂದು ತನ್ನೆದುರು ಹಾಜರಾಗುವಂತೆ ಆದೇಶಿಸಿದೆ. ನಾಲ್ಕು ತಿಂಗಳ ತಿಹಾರ ಜೈಲು ವಾಸದ ಬಳಿಕ ಯಾದವ ಕಳೆದ ಎಪ್ರಿಲ್ ನಲ್ಲಿ ಜಾಮೀನು ಬಿಡುಗಡೆಗೊಂಡಿದ್ದಾರೆ.
ಅಮೆರಿಕದ ಎಫ್ಬಿಐ ಕೂಡ ಯಾದವರನ್ನು ತನ್ನ ‘ವಾಂಟೆಡ್’ ಪಟ್ಟಿಯಲ್ಲಿರಿಸಿದ್ದು, ಅವರ ಕುರಿತು ಹೆಚ್ಚಿನ ಮಾಹಿತಿಗಾಗಿ ಕೋರಿದೆ.
ಅಮೆರಿಕದ ದೋಷಾರೋಪ ಪಟ್ಟಿಯಲ್ಲಿ ಯಾದವ ಅವರನ್ನು ‘ರಾ’ದ ಹಿರಿಯ ಕ್ಷೇತ್ರಾಧಿಕಾರಿ ಎಂದು ಹೇಳಲಾಗಿದೆ. ಆದರೆ ಭಾರತದ ವಿದೇಶಾಂಗ ಸಚಿವಾಲಯವು ಯಾದವ ಭಾರತ ಸರಕಾರದ ಉದ್ಯೋಗಿಯಲ್ಲ ಎಂದು ಅ.17ರಂದು ತಿಳಿಸಿತ್ತು.
ದಿಲ್ಲಿಯ ರೋಹಿಣಿ ಪ್ರದೇಶದ ನಿವಾಸಿಯೋರ್ವರ ದೂರಿನ ಮೇರೆಗೆ ಯಾದವ ಮತ್ತು ಸಹಚರನ ವಿರುದ್ಧ ಹಫ್ತಾ ವಸೂಲಿ ಪ್ರಕರಣ ದಾಖಲಾಗಿದೆ. ಪೋಲಿಸರು ತನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಯಾದವ ಪ್ರತಿಪಾದಿಸಿದ್ದಾರೆ.