ನ್ಯೂಸ್‌ಕ್ಲಿಕ್ ಪ್ರಕರಣ : 8,000ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ದಿಲ್ಲಿ ಪೊಲೀಸರು
Update: 2024-03-30 16:23 GMT
ಹೊಸ ದಿಲ್ಲಿ: ನ್ಯೂಸ್‌ಕ್ಲಿಕ್ ಹಾಗೂ ಅದರ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥರ ವಿರುದ್ಧ ದಾಖಲಾಗಿರುವ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ದಿಲ್ಲಿ ಪೊಲೀಸರು ಸುಮಾರು 8,000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಚೀನಾ ಪರ ಕಾರ್ಯಸೂಚಿಯನ್ನು ಹರಡುತ್ತಿದ್ದಾರೆ ಎಂಬ ಆರೋಪದಲ್ಲಿ ಅವರು ಹಾಗೂ ಅವರ ಮಾಲಕತ್ವದ ಪೋರ್ಟಲ್ ಅನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಎದುರು ದಿಲ್ಲಿ ಪೊಲೀಸರು ಅಂತಿಮ ವರದಿಯನ್ನು ಸಲ್ಲಿಸಿದರು.
ವಿಶೇಷ ಸಾರ್ವಜನಿಕ ಅಭಿಯೋಜಕರಾದ ಅಖಂಡ್ ಪ್ರತಾಪ್ ಸಿಂಗ್ ಹಾಗೂ ಸೂರಜ್ ರಾಠಿ ಪ್ರಕಾರ, ಪ್ರಬೀರ್ ಪುರ್ಕಾಯಸ್ಥ ಹಾಗೂ ಪಿಪಿಕೆ ನ್ಯೂಸ್‌ಕ್ಲಿಕ್ ಸ್ಟುಡಿಯೊ ಪ್ರೈವೇಟ್ ಲಿಮಿಟೆಡ್ ಆರೋಪಿಗಳಾಗಿದ್ದಾರೆ.
ನ್ಯಾಯಾಲಯದ ಮೂಲಗಳ ಪ್ರಕಾರ, ದೋಷಾರೋಪ ಪಟ್ಟಿಯು ಅನುಬಂಧಗಳು ಸೇರಿದಂತೆ 8,000ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದೆ. ಈ ಕುರಿತ ವಿಚಾರಣೆಯನ್ನು ಎಪ್ರಿಲ್ 16ಕ್ಕೆ ನಿಗದಿಗೊಳಿಸಲಾಗಿದೆ.